ಬೆಳೆ ನಾಶ ಮಾಡುತ್ತಿದ್ದಾಗ ಓಡಿಸಲು ಮುಂದಾದ ಯುವಕ ಆನೆ ದಾಳಿಗೆ ಬಲಿ

Public TV
1 Min Read
female elephant

– ರೊಚ್ಚಿಗೆದ್ದ ಗ್ರಾಮಸ್ಥರು ಮಾಡಿದ್ದೇನು..?

ಭೋಪಾಲ್:‌ ಆನೆ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಗುರುವಾರ ಸಂಜೆ ಜೈತಾರಿ ಅರಣ್ಯ ವ್ಯಾಪ್ತಿಯಲ್ಲಿ ಬೆಳೆ ನಾಶ ಮಾಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಓಡಿಸಲು ಮುಂದಾದಾಗ ಯುವಕನ ಮೇಲೆ ಆನೆ ದಾಳಿ (Elephant Attack in Madhyapradesh) ಮಾಡಿದೆ. ಪರಿಣಾಮ ಗಂಭೀರ ಗಾಯಗೊಂಡು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಸಿಟ್ಟಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ ಅವರ ವಾಹನಗಳನ್ನು ಜಖಂಗೊಳಿಸಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸ್ಥಳಕ್ಕೆ ಪೊಲೀಸ್ ಪಡೆಗಳನ್ನು ರವಾನಿಸಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಬಲಿ; ಕರ್ನಾಟಕ ಸರ್ಕಾರದಿಂದ ಪರಿಹಾರ – ಈಶ್ವರ್‌ ಖಂಡ್ರೆ ಹೇಳಿದ್ದೇನು?

ಸದ್ಯ ಅನುಪ್ಪುರ್ ಆನೆ ದಾಳಿ ಘಟನೆಯಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ಸಿಎಂ ಮೋಹನ್ ಯಾದವ್ ಘೋಷಿಸಿದ್ದಾರೆ. ಇತ್ತೀಚೆಗೆ ಅನುಪ್ಪುರ್ ಜಿಲ್ಲೆಯಲ್ಲಿ ಆನೆಗಳ ದಾಳಿ ಪ್ರಕರಣ ಹೆಚ್ಚುತ್ತಿದೆ. ಕಾಡಾನೆಗಳು ಆಹಾರ ಅರಸಿ ನಾಡಿಗೆ ಬರುತ್ತಿದ್ದು, ಬೆಳೆ ಹಾಗೂ ಮನೆಗಳಿಗೆ ಹಾನಿ ಮಾಡುತ್ತಿವೆ. ಮಧ್ಯಪ್ರದೇಶದ ಶಾಹದೋಲ್ ವಿಭಾಗವು ಆನೆ ಮತ್ತು ಮನುಷ್ಯ ಸಂಘರ್ಷದ ಹೊಸ ಕೇಂದ್ರವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 25 ಮಂದಿ ಆನೆ ದಾಳಿಗೆ ಬಲಿಯಾಗಿದ್ದಾರೆ. 40-50 ಆನೆಗಳ ದೊಡ್ಡ ಹಿಂಡುಗಳು ಹಳ್ಳಿಗಳ ಬಳಿ ತಿರುಗಾಡುವುದನ್ನು ಗ್ರಾಮಸ್ಥರು ಆಗಾಗ್ಗೆ ಗಮನಿಸುತ್ತಾರೆ. ಆದರೆ ಈ ಸಂಬಂಧ ಸರ್ಕಾರ ಹಾಗೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Share This Article