ಕೋಲಾರ: ಹೂ, ಹಣ್ಣು ಹಾಗೂ ತರಕಾರಿಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ರೈತರು ಟೊಮೆಟೊ ಹಾಗೂ ಹೂವು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆಗೆ ಟೊಮೆಟೊ, ತರಕಾರಿಗಳನ್ನು ಸುರಿದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣಯ್ಯ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರ ಹಿಡಿದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ದಿಕ್ಕಾರ ಕೂಗಿದರು. ಬಳಿಕ ಟೊಮೆಟೊ ರಾಶಿಯ ಮೇಲೆ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ರಸ್ತೆ ಮಧ್ಯೆ ಟೊಮೆಟೊ ತೋಟವನ್ನು ನಿರ್ಮಿಸಿ, ಅದರಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ಅಣುಕು ಪ್ರದರ್ಶನ ಮಾಡಿದರು. ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ತರಕಾರಿಗಳು ಸೇರಿದಂತೆ ಟೊಮೊಟೊ ಬೆಲೆ ಕುಸಿತವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಟೊಮೆಟೊ ಬೆಳೆಯಲು ಸಾವಿರಾರು ರೂಪಾಯಿ ವೆಚ್ಚ ಮಾಡುತ್ತೇವೆ. ಆದರೆ ನಮಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಇತ್ತ ಬೆಂಬಲ ಬೆಲೆಯೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ನಕಲಿ ಬಿತ್ತನೆ ಬೀಜದ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಗೆ ಕಡಿವಾಣ ಹಾಕುವ ಮೂಲಕ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಸ್ಥಳೀಯರು ಟೊಮೆಟೊ ಆಯ್ದುಕೊಳ್ಳಲು ಮುಂದಾದರು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಪ್ರತಿಭಟನೆ ಬಳಿಕ, ಟೊಮೆಟೊ ರಾಶಿಯನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv