ಚಿಕ್ಕಬಳ್ಳಾಪುರ: ಸಿಎಎ ಹಾಗೂ ಎನ್‌ಆರ್‌ಸಿ ಪ್ರತಿಭಟನೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರ್ಲಕೊಂಡ ಬಳಿ ನಡೆದಿದೆ.
ಬಾಗೇಪಲ್ಲಿ ಪಟ್ಟಣದ ಮಹಮದ್ ಖಾದೀರ್ ಪುತ್ರ ಮಹಮದ್ ತೋಹಿರ್ (18) ಮೃತ ಯುವಕ. ಇಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು, ಮುಸ್ಲಿಂ ಪೋರಂ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಪ್ರತಿಭಟನೆ ನಡೆಯುತ್ತಿತ್ತು. ಈ ಪ್ರತಿಭಟನೆಯಲ್ಲಿ ಬಾಗೇಪಲ್ಲಿ ಪಟ್ಟಣದಿಂದ ತನ್ನ ತಂದೆ ಸಂಬಂಧಿಕರ ಜೊತೆ ಮೃತ ತೋಹಿರ್ ಭಾಗಿಯಾಗಿದ್ದನು.
ಇದೇ ವೇಳೆ ಜಿಲ್ಲಾಡಳಿತ ಭವನದ ಮಾವಿನ ಮರದಡಿ ಫೋಟೋಗೆ ಪೋಸ್ ಕೊಟ್ಟು ಹಲವು ಫೋಟೋಗಳನ್ನ ತೆಗೆಸಿಕೊಂಡಿದ್ದನು. ಆದರೆ ಪ್ರತಿಭಟನೆ ಮುಗಿದ ನಂತರ ತನ್ನ ತಂದೆ ಹಾಗೂ ಸಂಬಂಧಿಕರೊಂದಿಗೆ ಕಾರಿನಲ್ಲಿ ಬಾಗೇಪಲ್ಲಿಗೆ ತೆರಳುತ್ತಿದ್ದನು. ಆಗ ಹಿಂಬದಿಯಿಂದ ಬಂದ ಮತ್ತೊಂದು ಕಾರು ಡಿಕ್ಕಿ ಹೊಡೆದು ಅಪಘಾತವಾಗಿದೆ. ಪರಿಣಾಮ ಯುವಕ ಮಹಮದ್ ತೋಹಿರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತನ ತಂದೆ ಮಹಮದ್ ಖಾದೀರ್ ಹಾಗೂ ಸಂಬಧಿಕರಾದ ರಿಜ್ವಾನ್, ಮಹಮದ್ ಶಮೀ ಉಲ್ಲಾ, ಇದಾಯತ್ ಉಲ್ಲಾ ಗಾಯಗೊಂಡಿದ್ದು, ಅವರು ಬಾಗೇಪಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.