ಮಡಿಕೇರಿ: ಕಾವೇರಿ ತಾಲೂಕು ರಚಿಸಬೇಕು ಎನ್ನುವ ಬೇಡಿಕೆ ಮುಂದಿಟ್ಟುಕೊಂಡು ಕುಶಾಲನಗರದಲ್ಲಿ ನಡೆಯುತ್ತಿರುವ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲೆಯ ಕುಶಾಲನಗರ ಕೇಂದ್ರವಾಗಿರಿಸಿಕೊಂಡು ನಗರದ ಪ್ರಮುಖ ಕೇಂದ್ರವಾದ ಕಾರು ನಿಲ್ದಾಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ಸರಣಿ ಸತ್ಯಾಗ್ರಹ ನಡೆಯುತ್ತಿದ್ದು, ಪ್ರತಿಭಟನೆಯ ಅಂಗವಾಗಿ ಸೋಮವಾರ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ವಾಹನ ಸಂಚಾರವನ್ನು ತಡೆಹಿಡಿಯಲಾಯಿತು. ಇಂದರಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ಇದರಿಂದ ಅಡ್ಡಿ ಆಗಿತ್ತು.
Advertisement
ವಾಣಿಜ್ಯೋದ್ಯಮಕ್ಕೆ ಕೊಡಗು ಜಿಲ್ಲೆಯಲ್ಲೇ ಕುಶಾಲನಗರ ಪ್ರಸಿದ್ಧ ನಗರವಾಗಿದೆ. 19 ಗ್ರಾಮ ಪಂಚಾಯತ್ ಗಳನ್ನು ಸೇರಿಸಿ ಕುಶಾಲನಗರ ಕೇಂದ್ರವಾಗಿಸಿಕೊಂಡು ತಾಲೂಕು ಮಾಡಿದರೆ ವ್ಯಾಪಾರ ಹೆಚ್ಚಾಗುತ್ತದೆ. ಇದರಿಂದಾಗಿ ವ್ಯಾಪಾರ ವಹಿವಾಟಿಗೆ ಪೂರಕವಾದ ಉದ್ದಿಮೆಗಳು ಪ್ರಾರಂಭವಾಗುತ್ತವೆ ಎನ್ನುವ ವಾದವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ.
Advertisement
ಅಷ್ಟೇ ಅಲ್ಲದೇ ಕಂದಾಯ, ನ್ಯಾಯಾಲಯ, ಪೊಲೀಸ್ ವ್ಯವಸ್ಥೆಗಳು ಮತ್ತಷ್ಟು ಸದೃಢಗೊಳ್ಳುತ್ತದೆ. ತಾಲೂಕು ರಚನೆಗೆ ಬೇಕಾಗುವಂತಹ ಎಲ್ಲ ಮಾನದಂಡ, ಅರ್ಹತೆ ಕುಶಾಲನಗರಕ್ಕೆ ಇದೆ. ಹೀಗಾಗಿ ಅದಷ್ಟು ಬೇಗ ಸರ್ಕಾರ ಪರಿಗಣಿಸಿ ತಾಲೂಕು ರಚಿಸಬೇಕು ಎಂದು ಪ್ರತಿಭಟನಾಕಾರರು ಅಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.