Connect with us

ಕಕ್ಕೇರಾ ಪಟ್ಟಣವನ್ನು ತಾಲೂಕು ಮಾಡಿ: ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ

ಕಕ್ಕೇರಾ ಪಟ್ಟಣವನ್ನು ತಾಲೂಕು ಮಾಡಿ: ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ

ಯಾದಗಿರಿ: ಕಕ್ಕೇರಾ ಪಟ್ಟಣವನ್ನು ತಾಲೂಕು ಕೇಂದ್ರವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕಕ್ಕೇರಾ ಪಟ್ಟಣವನ್ನು ಬಂದ್ ಮಾಡಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಿಲ್ಲೆಯ ಅತಿ ದೊಡ್ಡ ಪಟ್ಟಣವಾದ ಪುರಸಭೆ ಹೊಂದಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣವನ್ನು ಕೈಬಿಟ್ಟು ಹುಣಸಗಿ, ವಡಗೇರಾ ಹಾಗೂ ಗುರುಮಠಕಲ್ ಹೋಬಳಿ ಕೇಂದ್ರಗಳನ್ನು ತಾಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಕ್ಕೇರಾವನ್ನು ತಾಲೂಕು ಮಾಡಬೇಕು ಎನ್ನುವುದು ದಶಕಗಳಿಂದ ನಾವು ಆಗ್ರಹಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ನಮಗೆ ನಿರಾಸೆಯಾಗಿದೆ ಎಂದು ಸರ್ಕಾರದ ವಿರುದ್ಧ ಜನ ಅಸಮಾಧಾನ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದಲೇ ಕಕ್ಕೇರಾ ಪಟ್ಟಣದ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ವಿವಿಧ ಸಂಘಟನೆ ಕಾರ್ಯಕರ್ತರು ಹಾಗೂ ಪಟ್ಟಣದ ನಿವಾಸಿಗಳೆಲ್ಲರು ಸೇರಿ ಶಾಂತಪುರ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಬಸ್ ಹಾಗೂ ಇನ್ನಿತರ ವಾಹನಗಳು ಕಿಮೀ ಗಟ್ಟಲೆ ರಸ್ತೆಯಲ್ಲಿ ನಿಂತುಕೊಂಡಿದ್ದವು. ವಾಹನ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಮಕ್ಕಳು, ವೃದ್ಧರು, ಹಾಗೂ ದೂರದ ಊರಿಗೆ ತೆರಳುವ ಜನರಿಗೆ ಬೀಸಿಲಿನ ತಾಪ ಜೊತೆ ಪ್ರತಿಭಟನೆ ಬಿಸಿ ತಟ್ಟಿತ್ತು.

ಸಿಎಂ ಸಿದ್ದರಾಮಯ್ಯ ಹೋರಾಟಕ್ಕೆ ಮಣಿದು ತಾಲೂಕಾ ಕೇಂದ್ರವೆಂದು ಘೋಷಣೆ ಮಾಡಬೇಕು ಇಲ್ಲದ್ದಿದ್ದರೆ ಸಿಎಂ ನಿವಾಸ ಇಲ್ಲವೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದ್ದಾರೆ. ಕಕ್ಕೇರಾ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕೂಡ ಹೋರಾಟದಲ್ಲಿ ಭಾಗವಹಿಸಿದ್ದರು.

 

Advertisement
Advertisement