ಬೆಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಸಮಗ್ರ ನೀರಾವರಿ ಯೋಜನೆಗೆ ಒತ್ತಾಯಿಸಿ ಇಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಅಜ್ಜಿಯೊಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದ ಘಟನೆ ನಡೆದಿದೆ.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಎದುರಿನಿಂದ ಮೆರವಣಿಗೆ ಹೋಗಿ ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದರು. ಮಾತ್ರವಲ್ಲದೇ ಚಾಲುಕ್ಯ ಸರ್ಕಲ್ ಮಧ್ಯೆಯೇ ಪ್ರತಿಭಟನಾಕಾರರು ಕುಳಿತ ಪರಿಣಾಮ ಸರ್ಕಲ್‍ನಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇದರಿಂದ ಯಾವುದೇ ಅಹಿತರ ಘಟನೆ ನಡೆಯಬಾರದೆಂದು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಮಾತನಾಡಿ, ಬಯಲುಸೀಮೆಯ ನೀರಿನ ಸಮಸ್ಯೆಗೆ ಏನು ಪರಿಹಾರ ಕೊಟ್ಟಿದ್ದೀರಿ?. ಸರ್ಕಾರ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಚಿಕ್ಕಾಬಳ್ಳಾಪುರ ರೈತರು ಕೂಡ ಇಂದು ಖುದ್ದಾಗಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಬಂದ್ ಸಹ ನಡೆಸುತ್ತೇವೆ. ಕರ್ನಾಟಕ ಬಂದ್ ಬಗ್ಗೆ ನಾಳೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ವರ್ಷ ಪ್ರತಿಭಟನೆ ನಡೆಸಿದಾಗ ತಜ್ಞರ ಸಮಿತಿ ರಚನೆ ಮಾಡಿ ನೀರಿನ ಪರಿಹಾರ ನೀಡೋದಾಗಿ ಹೇಳಿತ್ತು. ಆದ್ರೇ ಈಗ ಸಿಎಂ ನಿದ್ದೆಗಣ್ಣಲ್ಲಿದ್ದಾರೆ ಅಂತಾ ಇತ್ತ ಚಿಕ್ಕಬಳ್ಳಾಪುರ ರೈತರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಜ್ಜಿಯೊಬ್ಬರನ್ನೂ ಕೂಡ ಯಾವುದೇ ಮುಲಾಜಿಲ್ಲದೇ ಧರಧರನೇ ಎಳೆದೊಯ್ದಿದ್ದಾರೆ.