ಬೆಂಗಳೂರು: ರಾಜಧಾನಿಯ ಅವ್ಯವಸ್ಥೆಗಳ ವಿರುದ್ಧ ಇದೇ ಮೇ 28 ರಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y.Vijayendra) ಪ್ರಕಟಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ತಮ್ಮ ನೇತೃತ್ವದಲ್ಲಿ ಇಂದು (ಶುಕ್ರವಾರ) ಬೆಂಗಳೂರಿನ ಸಮಸ್ಯೆಗಳ ಕುರಿತು ಚರ್ಚೆಗಾಗಿ ನಡೆಸಿದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇದನ್ನೂ ಓದಿ: ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ – ಎಸ್‌ಐಟಿ ಸಹಾಯವಾಣಿಗೆ 30 ಕ್ಕೂ ಹೆಚ್ಚು ಕರೆ
- Advertisement3
ಬೆಂಗಳೂರು ನಗರದ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರತಿ ವಾರ್ಡಿನಲ್ಲಿ ಬಿಜೆಪಿ ವತಿಯಿಂದ ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರು ಮಹಾನಗರದ ಜನತೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಿರಂತರವಾಗಿ ಇರಲಿದೆ. ಕೇವಲ ನಾಮಕಾವಾಸ್ತೆ ಹೋರಾಟ ಇದಲ್ಲ. ಸಮಸ್ಯೆಗೆ ಪರಿಹಾರ, ಹೋರಾಟಕ್ಕೆ ಜಯ ಸಿಗಬೇಕಿದೆ. ಆ ನಿಟ್ಟಿನಲ್ಲಿ ಹೋರಾಟ ನಡೆಯಲಿದೆ ಎಂದು ವಿವರಿಸಿದರು.
- Advertisement
ಇಂದು ನಗರದ ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಕಾರ್ಪೊರೇಟರ್‌ಗಳ ಸಭೆಯನ್ನು ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಇವತ್ತು ಆಗುತ್ತಿರುವ ಅವ್ಯವಸ್ಥೆಗಳನ್ನು ಚರ್ಚಿಸಿದ್ದೇವೆ. ಕೇವಲ ಎರಡು ದಿನ ಮಳೆ ಬಂದಾಗ ಬೆಂಗಳೂರಿನ ರಸ್ತೆಗಳು ವಾಹನ ಓಡಾಡದಂತೆ ಬ್ಲಾಕ್ ಆಗಿದ್ದವು. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ಜನರಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ ಒಂದು ವರ್ಷದಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ಇಲ್ಲ: ಕೆ.ರಘುಪತಿ ಭಟ್ ಬೇಸರ
ಎಷ್ಟೇ ಮಳೆ ಬಂದರೂ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಆಯುಕ್ತರು ಹೇಳುತ್ತಾರೆ. ತಯಾರಿದ್ದೇವೆ ಎಂದು ಅವರು ಭಾಷಣ ಮಾಡಿದರೂ ಅವ್ಯವಸ್ಥೆಗಳು ಹಾಗೇ ಉಳಿದಿವೆ. ಈ ರಾಜ್ಯ ಸರ್ಕಾರವು ಆಸ್ತಿ ತೆರಿಗೆ, ಮೋಟಾರು ವಾಹನ ತೆರಿಗೆ ಸೇರಿ ಎಲ್ಲಾ ತೆರಿಗೆಗಳನ್ನು ಹೆಚ್ಚಿಸಿದೆ. ಆದರೆ, ಬೆಂಗಳೂರಿನ ಜನತೆಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ತಿಳಿಸಿದರು.
ರಸ್ತೆಗಳು ಗುಂಡಿಗಳಿಂದ ತುಂಬಿ ಹೋಗಿವೆ. ಕಸ ವಿಲೇವಾರಿಯೂ ಸರಿಯಾಗಿ ಆಗುತ್ತಿಲ್ಲ. ಬೆಂಗಳೂರಿಗೆ ಅತಿ ಹೆಚ್ಚು ಸಚಿವರಿದ್ದರೂ ಈ ನಗರದ ಅಭಿವೃದ್ಧಿ ಕುರಿತು ಯಾರು ಕೂಡ ಚಿಂತನೆ ಮಾಡದೆ ಇರುವುದು ನಿಜವಾಗಿ ಒಂದು ದುರಂತ ಎಂದು ಬೇಸರಿಸಿದರು.