ಬೆಂಗಳೂರು: ರಾಜ್ಯದೆಲ್ಲೆಡೆ ಇಂದು ಪೌರತ್ವ ಕಾಯ್ದೆ ಖಂಡಿಸಿ ಜನ ಬೀದಿಗಿಳಿಯಲಿದ್ದಾರೆ. ಆದರೆ ಪೊಲೀಸರು ಈಗಾಗಲೇ ಕಂಡೀಷನ್ ಹಾಕಿದ್ದಾರೆ.
ಪೌರತ್ವ ಕಾಯ್ದೆ ಬಗ್ಗೆ ಬೆಂಗಳೂರಿನಲ್ಲಿ ರ‍್ಯಾಲಿ ನಡೆದರೆ ಇಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯಲಿದೆ. ಕಾಯ್ದೆ ಖಂಡಿಸಿ ಹತ್ತಾರು ಸಂಘಟನೆಗಳು, ಸಾವಿರಾರು ಜನ ರೋಡಿಗಿಳಿಯಲಿದ್ದಾರೆ. ಆದರೆ ಅರ್ಧ ಗಂಟೆ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಿದ್ದು, ಅದಕ್ಕೂ ಮೀರಿ ಪ್ರತಿಭಟನೆ ನಡೆಸಿದ್ರೆ ಕಾನೂನು ಕ್ರಮ ಗ್ಯಾರೆಂಟಿ ಅಂತ ಪೊಲೀಸರು ಗುಡುಗಿದ್ದಾರೆ. ಅಲ್ಲದೆ ಪೊಲೀಸರು ಗುರುತಿಸಿದ ಸರ್ಕಲ್‍ನಲ್ಲೇ ಪ್ರತಿಭಟನೆ ನಡೆಸಬೇಕು. ಅದು ಬಿಟ್ಟು ಬೇರೆಡೆ ಪ್ರತಿಭಟನೆ ನಡೆಸುವಂತಿಲ್ಲ.
ಪೌರತ್ವ ಕಾಯ್ದೆ ಖಂಡಿಸಿ ಇಂದು ಬೀದರ್ ಬಂದ್‍ಗೆ ಕರೆ ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಂದತಿ ಹಬ್ಬಿತ್ತು. ಆದರೆ ಈ ಬಗ್ಗೆ ಸ್ವತಃ ಎಸ್ ಪಿ ಟಿ. ಶ್ರಿಧರ್ ಸ್ಪಷ್ಟನೆ ನೀಡಿದ್ದು, ಬಂದ್ ಇಲ್ಲ, ರ‍್ಯಾಲಿಯೂ ಇಲ್ಲ. ಬರೀ ಪ್ರತಿಭಟನೆ ಇದೆ ಎಂದಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ ಎಂದು ಎಸ್ ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಾರವಾರದ ಭಟ್ಕಳದಲ್ಲಿ ಮುಸ್ಲಿಂ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಲಿದೆ. ಸೆಕ್ಷನ್ 144 ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಷರತ್ತುಬದ್ಧ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭಟ್ಕಳ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇಂದು ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಪ್ರತಿಭಟನೆ ನಾಳೆಗೆ ಮುಂದೂಡಿಕೆಯಾಗಿದೆ. ಸಿ.ಎಂ ಇಬ್ರಾಹಿಂ ಹಾಗೂ ಅಂಜುಮನ್ ಇಸ್ಲಾಂ ಸಂಸ್ಥೆ ಮುಖಂಡರೊಂದಿಗೆ ಸಭೆ ನಡೆಸಿ ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಚಾಮರಾಜನಗರದಲ್ಲಿ ಪ್ರತಿಭಟನೆಗೆ ಅನುಮತಿ ಇಲ್ಲ ಅಂತ ಪೊಲೀಸ್ ಇಲಾಖೆ ಹೇಳಿದೆ. ಇತ್ತ ಬೆಳಗಾವಿಯಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ಬಳಿಕ ಕಲ್ಲು ತೂರಾಟ ಮಾಡಿದ ಸಂಬಂಧ ಮಾರ್ಕೆಟ್ ಠಾಣೆ ಪೊಲೀಸರು ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ.
ಕಲಬುರಗಿ, ಮೈಸೂರು, ರಾಮನಗರ, ಗದಗ ಸೇರಿದಂತೆ ರಾಜ್ಯದೆಲ್ಲೆಡೆ ಮುಸ್ಲಿಂ ಸಂಘಟನೆಗಳು ಪ್ರತಿಭಟನೆಗೆ ಕರೆಕೊಟ್ಟಿದೆ. ಪೊಲೀಸರು ಈಗಾಗಲೇ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಪ್ರತಿಭಟನೆ ಅಂತ ಕಾನೂನು ಕೈಗೆ ತೆಗೆದುಕೊಳ್ಳುವ ಮುನ್ನ ಎಚ್ಚರವಾಗಿರಿ.