ಬೆಳಗಾವಿ: ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ನಿನ್ನೆ ರಾತ್ರಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಕೆಲವರು ಕಾನೂನು ಬಾಹಿರವಾಗಿ ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಅಲ್ಲಿನ ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?
ಅಲ್ಲಿನ ಕನ್ನಡಿಗರ ರಕ್ಷಣೆ ಹಾಗೂ ಬಸ್ಸು ಇತ್ಯಾದಿ ವಾಹನಗಳ ರಕ್ಷಣೆ ಮಾಡಲು ನಮ್ಮ ಪೊಲೀಸ್ ಮಹಾ ನಿರ್ದೇಶಕರು ಅಲ್ಲಿನ ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ಗೃಹ ಸಚಿವರು ಮಹಾರಾಷ್ಟ್ರದ ಗೃಹ ಸಚಿವರೊಂದಿಗೆ ಮಾತನಾಡಲಿದ್ದಾರೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯವಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಶಿವಸೇನೆಯ ಸಂಜಯ್ ರಾವತ್ ಅವರು ಮರಾಠಿಗಳು ಒಂದಾಗುವಂತೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಯಾರನ್ನೂ ಯಾವ ಸಮಯದಲ್ಲೂ ಪ್ರಚೋದನೆ ಮಾಡಬಾರದು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ, ದೇಶವನ್ನು ಒಗ್ಗೂಡಿಸಿದರು. ಅವರ ಹೆಸರಿನಲ್ಲಿ ನಾವು ಜಗಳವಾಡಿಕೊಂಡು ಒಡಕು ಮೂಡಿಸಿದರೆ ಅವರ ಹೋರಾಟಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಕಾನೂನನ್ನು ಕೈಗೆ ತೆಗೆದುಕೊಂಡು ಇಂತಹ ಕೆಲಸಗಳನ್ನು ಮಾಡಲು ಯಾರಿಗೂ ಕುಮ್ಮಕ್ಕು ನೀಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: MES ಪುಂಡರಿಗೆ ತಕ್ಕ ಶಾಸ್ತಿ ಆಗಲಿದೆ: ಸುನಿಲ್ ಕುಮಾರ್