ಬೆಂಗಳೂರು: ಮೈತ್ರಿ ಸರ್ಕಾರದ ವಿಶ್ವಾಸಮತಯಾಚನೆಗೆ ಗುರುವಾರ ಸಮಯ ನಿಗದಿಯಾದ ಬಳಿಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಲು ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಹಾಗೂ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ವಿಶ್ವಾಸಮತಯಾಚನೆ ಮಾಡಲು ಇನ್ನು ಎರಡು ದಿನ ಬಾಕಿ ಇದ್ದು, ಕಾಲವೇ ಎಲ್ಲವನ್ನು ನಿರ್ಧಾರ ಮಾಡುತ್ತೆ. ನಮ್ಮ ತಂತ್ರಗಾರಿಕೆ ಏನು, ಬಿಜೆಪಿ ತಂತ್ರಗಾರಿಕೆ ಏನು ಅನ್ನೋದು ಗುರುವಾರ ಗೊತ್ತಾಗುತ್ತೆ. ರಾಜೀನಾಮೆ ಕೊಟ್ಟಿರುವ ಶಾಸಕರು ವಾಪಸ್ ಬರುವ ವಿಶ್ವಾಸ ಇದೆ ಎಂದು ದಿನೇಶ್ ಗುಂಡೂರಾವ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ ಬೆದರಿಕೆ ಇದ್ದು, ತಾವು ಮಾಡುತ್ತಿರುವ ಕೃತ್ಯಕ್ಕೆ ಶಾಸಕರನ್ನು ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಶಾಸಕರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದೇವೆ ಎಂದರು. ಇತ್ತ ಕಾಂಗ್ರೆಸ್ ಶಾಸಕರು ತಾಜ್ ವಿವಾಂತ ಹೋಟೆಲ್ ನಲ್ಲಿ ತಂಗಿರುವ ಕಾರಣ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ತಾಜ್ ವಿವಾಂತ ಹೋಟೆಲ್‍ನಿಂದ ಬೇರೆಡೆ ಶಿಫ್ಟ್ ಮಾಡಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ.
Advertisement
ವಿಪ್ ಜಾರಿ: ಗುರುವಾರ ವಿಧಾನಸಭೆಯಲ್ಲಿ ದೋಸ್ತಿ ಸರ್ಕಾರದ ವಿಶ್ವಾಸಮತಯಾಚನೆ ಇರುವುದರಿಂದ ಬಿಜೆಪಿ ಪಕ್ಷ ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಜುಲೈ 18 ರಂದು ಎಲ್ಲಾ ಶಾಸಕರು ವಿಧಾನಸಭೆಯಲ್ಲಿ ಹಾಜರಿರಬೇಕು. ವಿಶ್ವಾಸಮತಯಾಚನೆ ವೇಳೆ ಸರ್ಕಾರದ ವಿರುದ್ಧ ಮತ ಹಾಕಬೇಕು ಎಂದು ಬಿಜೆಪಿ ಮುಖ್ಯ ಸಚೇತಕ ಸುನಿಲ್ ಕುಮಾರ್ ವಿಪ್ ಜಾರಿ ಮಾಡಿದ್ದಾರೆ.