ಆಸ್ತಿಗಾಗಿ ಸುಪಾರಿ ಕೊಟ್ಟು ತಮ್ಮನನ್ನೇ ಮುಗಿಸಿದ ಅಣ್ಣ – ಐವರು ಜೈಲು ಪಾಲು!

Public TV
2 Min Read
property dispute man gives supari to murder his brother 5 arrested in davanagere

ದಾವಣಗೆರೆ: ಆಸ್ತಿ ವಿಚಾರಕ್ಕೆ (Property Dispute) ವ್ಯಕ್ತಿಯೊಬ್ಬ ತನ್ನ ಮಗನೊಂದಿಗೆ ಸೇರಿಕೊಂಡು ತಮ್ಮನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪ್ರಕರಣ ದಾವಣಗೆರೆಯಲ್ಲಿ (Davanagere) ನಡೆದಿದೆ.

ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಎಂಬವರು ಕೊಲೆಯಾದ ದುರ್ದೈವಿ. ಸಿದ್ದಲಿಂಗಪ್ಪ ಬೋರ್ ಪಾಯಿಂಟ್ ಮಾಡಲು ತೆರಳಿದ್ದವರು ವಾಪಸ್ ಮನೆಗೆ ಬಂದಿರಲಿಲ್ಲ. ಅವರ ಮೃತದೇಹ ನಲ್ಲೂರು ಸಮೀಪದ ಭದ್ರಾ ಉಪ ನಾಲೆಯಲ್ಲಿ ಅ.22 ರಂದು ಪತ್ತೆಯಾಗಿತ್ತು. ಈ ಬಗ್ಗೆ ಅನುಮಾನಗೊಂಡ ಸಿದ್ದಲಿಂಗಪ್ಪ ಅವರ ಸೊಸೆ ದೊಡ್ಡಮ್ಮ ಇದು ಕೊಲೆ ಎಂದು ದೂರು ನೀಡಿದ್ದರು.

property dispute man gives supari to murder his brother 5 arrested in davanagere 1
– ಕೊಲೆಯಾದ ಸಿದ್ದಲಿಂಗಪ್ಪ

ದೂರಿನ ಆಧಾರದ ಮೇಲೆ ತನಿಖೆ ನಡೆಸಿದ್ದ ಪೊಲೀಸರು (Police) ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್, ಪ್ರಭು, ಪ್ರಶಾಂತ್ ನಾಯ್ಕ, ಸುಜಾತ ಹಾಗೂ ಶಿವಮೂರ್ತಪ್ಪ ಎಂಬವವರನ್ನು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಹತ್ಯೆಗೆ ಸುಪಾರಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಸಿದ್ದಲಿಂಗಪ್ಪ ಅವರಿಗೆ ಪರಮೇಶ್ವರಪ್ಪ ಹಾಗೂ ಶಿವಮೂರ್ತಪ್ಪ ಎಂಬ ಇಬ್ಬರು ಸಹೋದರರಿದ್ದರು. ಆಸ್ತಿ ವಿಚಾರವಾಗಿ ಸಿದ್ದಲಿಂಗಪ್ಪ ಹಾಗೂ ಶಿವಮೂರ್ತಪ್ಪ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಬಗ್ಗೆ ಕೋರ್ಟ್‍ನಲ್ಲಿ ವಿಚಾರಣೆ ಕೂಡ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಶಿವಮೂರ್ತಪ್ಪ ತನ್ನ ಪುತ್ರ ಸತೀಶ್‍ಗೆ ಚಿಕ್ಕಪ್ಪ ಸಿದ್ದಲಿಂಗಪ್ಪನನ್ನ ಹೇಗಾದರೂ ಮಾಡಿ ಮುಗಿಸು ಎಂದು ಹೇಳಿದ್ದ. ಅದರಂತೆ ಸತೀಶ್ ಸಂಚೊಂದನ್ನ ರೂಪಿಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಲಿಂಗದಳ್ಳಿಯ ಪ್ರಭು ಹಾಗೂ ದಾವಣಗೆರೆಯ ನಿಟ್ಟುವಳ್ಳಿಯ ಪ್ರಶಾಂತ್ ನಾಯ್ಕ ಎಂಬವವರನ್ನ ಭೇಟಿ ಮಾಡಿದ್ದ ಸತೀಶ್ 1 ಲಕ್ಷ ರೂ. ಕೊಟ್ಟು ಚಿಕ್ಕಪ್ಪನನ್ನ ಕೊಲೆ ಮಾಡಲು ತಿಳಿಸಿದ್ದ. ಅದರಂತೆ ಅ.21 ರಂದು ದಾವಣಗೆರೆ ತ್ರಿಶೂಲ್ ಚಿತ್ರಮಂದಿರದ ಬಳಿ ಆಟೋಗೆ ಗ್ಯಾಸ್ ತುಂಬಿಸಿ ಅವರಿಗೆ ಒಂದು ಸಾವಿರ ರೂ. ಅಡ್ವಾನ್ಸ್ ಕೂಡ ಸತೀಶ್ ನೀಡಿದ್ದ.

ಹಣ ಪಡೆದ ಪ್ರಭು ಹಾಗೂ ಪ್ರಶಾಂತ್ ಸೇರಿ ಸಿದ್ದಲಿಂಗಪ್ಪ ಅವರಿಗೆ ಬೋರ್ ಪಾಯಿಂಟ್ ಇದೆ ಎಂದು ಹೇಳಿ ತೊಗಲೆರೆ ಕ್ರಾಸ್ ಬಳಿ ಆಟೋದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದರು. ಅವರನ್ನು ಸುಮ್ಮನೆ ಆಟೋದಲ್ಲಿ ಓಡಾಡಿಸಿದ್ದಾರೆ. ಆಗ ಸಿದ್ದಲಿಂಗಪ್ಪ ಅವರಿಗೆ ಅನುಮಾನ ಬಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಿದ್ದಲಿಂಗಪ್ಪರನ್ನು ಇಬ್ಬರೂ ಸೇರಿ ಟವಲ್‍ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಕೈಕಾಲು ಕಟ್ಟಿ ನಾಲೆಗೆ ಎಸೆದಿದ್ದಾರೆ. ಅಷ್ಟೇ ಅಲ್ಲದೇ ಮೃತ ದೇಹದ ಮೇಲೆ ಕಲ್ಲನ್ನು ಇಟ್ಟಿದ್ದಾರೆ. ಬಳಿಕ ದುಷ್ಕರ್ಮಿಗಳು ಮೃತ ದೇಹದ ಫೋಟೋವನ್ನು ಸತೀಶ್‍ಗೆ ಕಳುಹಿಸಿದ್ದರು. ಈ ವೇಳೆ ಆತ 10,000 ರೂ. ಹಣವನ್ನು ಕಳಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ.

Share This Article