ಚಾಮರಾಜನಗರ: 1 ಎಕರೆ 5 ಗುಂಟೆ ಜಮೀನಿಗಾಗಿ ದೊಡ್ಡಪ್ಪನನ್ನು ಚಿಕ್ಕಪ್ಪನ ಮಕ್ಕಳು ಬರ್ಬರವಾಗಿ ಹೊಡೆದು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ತಾಲೂಕಿನ ವಡ್ಗಲ್‌ಪುರ ಗ್ರಾಮ ನಡೆದಿದೆ.
ಮಲ್ಲೇಶ್ ಕೊಲೆಯಾದ ವ್ಯಕ್ತಿ. ಮಲ್ಲೇಶ್‌ನ ಚಿಕ್ಕಪನ ಮಕ್ಕಳಾದ ನಾಗರಾಜ್, ದೊರೆಸ್ವಾಮಿ ಮತ್ತು ಮೀನಾ ಬಂಧಿತರು. ಮಲ್ಲೇಶ್ ಬಳಿ 2 ಎಕರೆ 15 ಗುಂಟೆ ಜಮೀನಿತ್ತು. ಈ ಜಮೀನಿನ ಪೈಕಿ 1 ಎಕರೆ 5 ಗುಂಟೆ ನಾಗರಾಜ್ ಕುಟುಂಬಕ್ಕೆ ಸೇರಬೇಕೆಂದು ಪಟ್ಟು ಹಿಡಿದು ಕುಳಿತಿದ್ದರು. ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲು ಏರಿತ್ತು. ರಾಜಿ ಪಂಚಾಯ್ತಿ ಬಳಿಕ ಮಲ್ಲೇಶ್ ಸಹ ಜಮೀನು ನೀಡಲು ಒಪ್ಪಿ ಸಹಿ ಕೂಡ ಹಾಕಿದ್ದ. ಆದರೆ, ಮಲ್ಲೇಶ್ ಮಕ್ಕಳು ಮಾತ್ರ ಆಸ್ತಿ ನೀಡಲು ಒಪ್ಪದೆ ಮತ್ತೆ ವ್ಯಾಜ್ಯ ತೆಗೆದು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದೆ ಕಾರಣಕ್ಕೆ ರೊಚ್ಚಿಗೆದ್ದಿದ್ದ ನಾಗರಾಜ್ ಕುಟುಂಬಸ್ಥರು ಮಲ್ಲೇಶ್ ಮಕ್ಕಳ ಮೇಲಿದ್ದ ಕೋಪವನ್ನ ಮಲ್ಲೇಶ್ ಮೇಲೆ ಈಗ ಕೊಂದು ತೀರಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜನಗರ ಗ್ರಾಮಾಂತರ ಪೊಲೀಸರು ನಾಗರಾಜ್, ದೊರೆಸ್ವಾಮಿ ಹಾಗೂ ಮೀನಾಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.