ಸಹಜ ಸ್ಥಿತಿಯತ್ತ ಜಮ್ಮು ಕಾಶ್ಮೀರ- ಶಾಲಾ, ಕಾಲೇಜುಗಳು ಪ್ರಾರಂಭ, ನಿಷೇಧಾಜ್ಞೆ ತೆರವು

Public TV
2 Min Read
jammu kashmir 1

ಶ್ರೀನಗರ: ಹಲವು ದಿನಗಳಿಂದ ಸ್ತಬ್ಧವಾಗಿದ್ದ ಜಮ್ಮು-ಕಾಶ್ಮೀರ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ. ಉಳಿದೆಡೆಯೂ ನಿರ್ಬಂಧನೆಯನ್ನು ಸಡಿಲಗೊಳಿಸಲಾಗಿದೆ.

ಜಮ್ಮುವಿನ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸಿದ್ದು, ದೋಡಾ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಹೇರಿದ್ದ ನಿಷಾಧಾಜ್ಞೆಯನ್ನು ತೆರವುಗೊಳಿಸಿದ್ದರಿಂದ ಸ್ಥಗಿತಗೊಂಡಿದ್ದ ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

jammu kashmir 2

ಜಮ್ಮುವಿನ ಐದು ಜಿಲ್ಲೆಗಳ ಎಲ್ಲಾ ಶಾಲಾ-ಕಾಲೇಜುಗಳು ಪುನರಾರಂಭಗೊಂಡಿದ್ದು, ಅಲ್ಲದೆ, ಸರ್ಕಾರಿ ಕಚೇರಿಗಳ ಹಾಜರಾತಿಯಲ್ಲಿಯೂ ಸಹ ಹೆಚ್ಚಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಮ್ಮು, ಕಥುವಾ, ಸಾಂಬಾ, ಉಧಂಪುರ್ ಮತ್ತು ರಿಯಾಸಿಯ ಜಿಲ್ಲೆಗಳಲ್ಲಿ ಎಲ್ಲ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ, ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತೆ ಪುನರಾರಂಭಗೊಂಡಿವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಆಗಸ್ಟ್ 5ರಂದು ನಿರ್ಬಂಧ ಹೇರಿದ ನಂತರ ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘನೆಗಳು ನಡೆದಿಲ್ಲ. ಹೀಗಾಗಿ ಈ ಜಿಲ್ಲೆಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಎಲ್ಲ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ತೆರೆದಿವೆ. ಸಂಚಾರವು ಸಹ ಈ ಜಿಲ್ಲೆಗಳಲ್ಲಿ ಎಂದಿನಂತೆ ಸಹಜವಾಗಿದೆ. ಈ ಮೂಲಕ ಈ ಸ್ಥಳಗಳಲ್ಲಿ ಎಲ್ಲ ರೀತಿಯ ನಿರಾಳತೆಯನ್ನು ಜನರಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.

ಶುಕ್ರವಾರ ಜಮ್ಮು ಮತ್ತು ಶ್ರೀನಗರದಲ್ಲಿ ಪ್ರಾರ್ಥನೆಯು ಸಹ ಶಾಂತಿಯುತವಾಗಿ ನಡೆಯಿತು. ಆದರೆ ಪೂಂಚ್, ರಾಜೌರಿ ಹಾಗೂ ರಾಂಬಾನ್ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧಿಕೃತ ಆದೇಶದ ಪ್ರಕಾರ, ಜಮ್ಮು ಭಾಗದ 10 ಜಿಲ್ಲೆಗಳ ಆಡಳಿತ ಮಂಡಳಿಗಳು ಆಗಸ್ಟ್ 5ರಂದು ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿತ್ತು.

ಕಿಶ್ತ್ವಾರ್ ಜಿಲ್ಲಾ ಅಭಿವೃದ್ಧಿ ಆಯುಕ್ತ ಅಂಗ್ರೆಜ್ ಸಿಂಗ್ ರಾಣಾ ಮಾತನಾಡಿ, ಸೋಮವಾರ ನಿಸೇಧಾಜ್ಞೆ ಹೇರಿದ ನಂತರ ಮೊದಲ ಬಾರಿಗೆ ಪಟ್ಟಣದ ವಿವಿಧ ಭಾಗಗಳಲ್ಲಿ ಹಂತ ಹಂತವಾಗಿ ಒಂದು ಗಂಟೆಗಳ ಕಾಲ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭದರ್ವಾ ಪಟ್ಟಣ ಮತ್ತು ದೋಡಾ ಜಿಲ್ಲೆ ಹಾಗೂ ಪಕ್ಕದ ಪ್ರದೇಶಗಳಲ್ಲಿಯೂ ಹಂತ ಹಂತವಾಗಿ ಕಫ್ರ್ಯೂವನ್ನು ಸಡಿಲಿಸಲಾಗುತ್ತಿದೆ. ರಾಂಬಾನ್ ಮತ್ತು ಪೂಂಚ್ ಜಿಲ್ಲೆಗಳು ಕೂಡ ಸಹಜ ಸ್ಥಿತಿಗೆ ಮರಳಿದ್ದು, ಶುಕ್ರವಾರ ಶಾಂತಿಯುತವಾಗಿ ಜನತೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಂತತೆ ಕಾಪಾಡಲು ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ. ಆದರೆ ಈ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *