ಬೀದರ್: ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆಗಳ ಅಧಿಕಾರಿಗಳು ತಾವು ಬಾರದೇ ತಮ್ಮ ಪರವಾಗಿ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿದ್ದು, ಇದರಿಂದ ಕೋಪಗೊಂಡ ಶಾಸಕ ನಾರಾಯಣರಾವ್ ಸಿಬ್ಬಂದಿಯನ್ನು ಸಭೆಯಿಂದ ಹೊರ ಹಾಕಿದ ಪ್ರಸಂಗ ನಡೆದಿದೆ.
ಬಸವಕಲ್ಯಾಣ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ ಕೆಲ ಇಲಾಖೆ ಅಧಿಕಾರಿಗಳು ತಾವು ಬಾರದೇ ತಮ್ಮ ಪರವಾಗಿ ಬೇರೊಬ್ಬ ಅಧಿಕಾರಿಯನ್ನು ಕಳುಹಿಸಿದ್ದರು. ಇದರಿಂದ ಕೋಪಗೊಂಡ ಶಾಸಕರು ಸಿಬ್ಬಂದಿಯನ್ನು ಸಭೆಯಿಂದ ಹೊರ ಹಾಕಿದ್ದಾರೆ.
ಬೆಳಗ್ಗೆ ಆರಂಭವಾಗಬೇಕಿದ್ದ ಸಭೆ ತಡವಾಗಿ ಮಧ್ಯಾಹ್ನ ಆರಂಭವಾಯಿತು. ಈ ವೇಳೆ ಬಹುತೇಕ ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಅಧಿಕಾರಿಗಳ ಗೈರು ಕುರಿತು ಗಮನಿಸಿ ಗರಂ ಆದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ಅವರು, ಸಭೆ ಆರಂಭದಲ್ಲಿಯೇ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ, ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ತಾ.ಪಂ ಸಿಇಒ ಪಿ.ಎಸ್.ಮಡೋಳಪ್ಪ ಅವರಿಗೆ ಸೂಚಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶಾಸಕ ನಾರಾಯಣರಾವ್, ಸಭೆಯಲ್ಲಿ ತಮ್ಮ ಇಲಾಖೆಯ ಮುಖ್ಯ ಅಧಿಕಾರಿಗಳ ಪರವಾಗಿ ಪಾಲ್ಗೊಂಡಿರುವ ಸಹಾಯಕ ಸಿಬ್ಬಂದಿ ಎದ್ದು ನಿಲ್ಲಿ ಎಂದು ತಿಳಿಸಿದರು. ಆಗ ನೀರಾವರಿ, ಮೀನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಸಭೆಯಲ್ಲಿ ಎದ್ದು ನಿಂತರು. ನಿಮ್ಮ ಇಲಾಖೆ ಅಧಿಕಾರಿಗಳು ಎಲ್ಲಿಗೆ ಹೋಗಿದ್ದಾರೆ ಎಂದು ಶಾಸಕರು ಪ್ರಶ್ನಿಸಿದರು. ಸಭೆಗೆ ಬರಲು ಸಾಧ್ಯವಾಗದವರು ನಮಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿ, ಸಭೆಯಲ್ಲಿ ಪಾಲ್ಗೊಂಡಿದ್ದ ಸಹಾಯಕ ಸಿಬ್ಬಂದಿಯನ್ನು ಸಭೆಯಿಂದ ಹೊರ ಹೋಗುವಂತೆ ಸೂಚಿಸಿದರು.