ಮೈಸೂರು ವಿವಿ ಪ್ರಾಧ್ಯಾಪಕನಿಂದಲೇ ಅಶ್ಲೀಲ ವೆಬ್‍ಸೈಟಿಗೆ ವಿದ್ಯಾರ್ಥಿನಿಯರ ಫೋಟೋ ಅಪ್ಲೋಡ್?

Public TV
2 Min Read
mysuru vv professor

ಮೈಸೂರು: ಮಾನಸ ಗಂಗೋತ್ರಿಯ  ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರ ಭಾವಚಿತ್ರಗಳನ್ನು ಅಶ್ಲೀಲ ವೆಬ್‍ಸೈಟ್‍ಗೆ ಹಾಕಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕನ ವಿರುದ್ಧವೇ ವಿದ್ಯಾರ್ಥಿನಿಯರು ಅನುಮಾನ ವ್ಯಕ್ತಪಡಿಸಿ ಕುಲಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

ವಿವಿಯ ಪರಿಸರ ವಿಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯರು ತಮ್ಮದೇ ವಿಭಾಗದ ಪ್ರಾಧ್ಯಾಪಕ ಎ.ಜಿ.ದೇವಿಪ್ರಸಾದ್ ವಿರುದ್ಧ ಅನುಮಾನ ವ್ಯಕ್ತಪಡಿಸಿ ವಿಭಾಗದ ಮುಖ್ಯಸ್ಥರಿಗೆ ಮತ್ತು ವಿವಿ ಕುಲಸಚಿವರಿಗೆ ಪತ್ರ ಬರೆದಿದ್ದಾರೆ.

ದೂರಿನಲ್ಲಿ ಏನಿದೆ?
ಪ್ರಾಧ್ಯಾಪಕ ಎ.ಜಿ.ದೇವಿಪ್ರಸಾದ್ ನಮ್ಮ ಜತೆ ಅನುಚಿತವಾಗಿ ವರ್ತಿಸುತ್ತಿದ್ದರು. ನಿಮ್ಮನ್ನು ಚಾರಿತ್ರ್ಯಹೀನರು ಎಂಬುದನ್ನು ನಾನು ಸಾಬೀತು ಮಾಡುವೆ. ಇದಕ್ಕಾಗಿ ನಾನು ಯಾವುದೇ ಮಟ್ಟ ತಲುಪಲು ಸಿದ್ಧ ಎಂದು ತರಗತಿಯಲ್ಲೇ ನಮಗೆ ಬೆದರಿಕೆ ಹಾಕಿದ್ದರು. ತರಗತಿಯಲ್ಲಿ ನಡೆದ ಆಂತರಿಕ ಪರೀಕ್ಷೆಯಲ್ಲಿ ನಮಗೆ ಅತೀ ಕಡಿಮೆ ಅಂಕಗಳನ್ನು ನೀಡಿ ಸೇಡು ತೀರಿಸಿಕೊಂಡಿದ್ದರು. ತರಗತಿಯಲ್ಲಿ ಲೈಂಗಿಕ ಹಾಸ್ಯಗಳನ್ನು ಮಾಡುತ್ತಿದ್ದರು. ಈ ಹಾಸ್ಯಗಳಿಂದ ನಾವು ಮುಜುಗರಕ್ಕೆ ಒಳಗಾಗಿದ್ದೇವು. ಅಷ್ಟೇ ಅಲ್ಲದೇ ಅವರು ತನ್ನ ಜೊತೆ ಪ್ರಾಜೆಕ್ಟ್ ಮಾಡುವಂತೆ ನಮ್ಮನ್ನು ಬಲವಂತ ಮಾಡುತ್ತಿದ್ದರು. ಈ ಪ್ರಾಜೆಕ್ಟ್ ಗೆ ನಾವು ಒಪ್ಪದಿದ್ದಕ್ಕೆ ನಮ್ಮ ಮೇಲೆ ಈ ರೀತಿಯ ಸೇಡನ್ನು ತೀರಿಸಿಕೊಂಡಿದ್ದಾರೆ ಎಂದು ಸವಿಸ್ತಾರವಾಗಿ ವಿದ್ಯಾರ್ಥಿನಿಯರು ಪತ್ರದಲ್ಲಿ ದೇವಿಪ್ರಸಾದ್ ವರ್ತನೆಯನ್ನು ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?
ಲೋಕ್ಯಾಟೋ ಎಂಬ ವೇಶ್ಯಾವಾಟಿಕೆಯ ವೆಬ್‍ಸೈಟ್ ನಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ 10 ವಿದ್ಯಾರ್ಥಿನಿಯರ ಫೋಟೋ ಮತ್ತು ಮೊಬೈಲ್ ನಂಬರ್ ಅಪ್ಲೋಡ್ ಮಾಡಲಾಗಿತ್ತು. ಇದರಿಂದಾಗಿ ಈ ವೆಬ್‍ಸೈಟ್ ನೋಡುವ ಕಾಮುಕರು ಈ ನಂಬರ್ ಗಳಿಗೆ ಕರೆ ಮಾಡಿ ಕೆಟ್ಟದಾಗಿ ಮಾತಾಡುತ್ತಿದ್ದರು. ನಮ್ಮ ನಂಬರ್ ಬೇರೆಯವರಿಗೆ ಹೇಗೆ ಸಿಕ್ಕಿತು? ಅದರಲ್ಲೂ ಈ ರೀತಿ ಯಾಕೆ ಕೆಟ್ಟದಾಗಿ ಮಾತಾಡುತ್ತಿದ್ದಾರೆ ಅಂತಾ ವಿದ್ಯಾರ್ಥಿನಿಯರು ಪರಿಶೀಲಿಸಿದಾಗ ಅವರ ಫೋಟೋ ಮತ್ತು ನಂಬರ್ ಅನ್‍ಲೈನ್ ವೇಶ್ಯಾವಾಟಿಕೆಯ ವೆಬ್‍ಸೈಟ್‍ನಲ್ಲಿ ಇರುವುದು ಗಮನಕ್ಕೆ ಬಂದಿತ್ತು. ತಕ್ಷಣ ಈ ವಿಚಾರವನ್ನು ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದು ನಂತರ ವಿವಿಯ ಕುಲಸಚಿವರ ಗಮನಕ್ಕೆ ತರಲಾಗಿತ್ತು. ಅವರ ಅನುಮತಿಯಂತೆ ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಈ ಸುದ್ದಿ ಬೆಳಕಿಗೆ ಬಂದಾಗ ವಿವಿಯ ಒಳಗಡೆ ಇರುವ ವಿದ್ಯಾರ್ಥಿನಿಯರಿಗೆ ಪರಿಚಯ ಇರುವ ವ್ಯಕ್ತಿಗಳೇ ಈ ಕೃತ್ಯ ಎಸಗಿದ್ದಾರೆ ಎನ್ನುವ ಶಂಕೆ ಮೂಡಿತ್ತು. ಈ ಶಂಕೆಗೆ ಪೂರಕ ಎಂಬಂತೆ ವಿದ್ಯಾರ್ಥಿನಿಯರು ಈಗ ಪ್ರಾಧ್ಯಾಪಕನ ವಿರುದ್ಧ ದೂರು ನೀಡಿದ್ದು ತನಿಖೆಯಿಂದ ನಿಜಾಂಶ ಪ್ರಕಟವಾಗಲಿದೆ.

mysuru vv letter

Share This Article
Leave a Comment

Leave a Reply

Your email address will not be published. Required fields are marked *