ತುಮಕೂರು: ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ನಾಲ್ವರ ತಂಡ ಎರಡು ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಮತ್ತು ವ್ಯಕ್ತಿಗತವಾಗಿ ಕಂಚಿನ ಪದಕ ಪಡೆದು ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
ಕೇರಳದ ಕೋಝಿಕೋಡ್‍ನಲ್ಲಿ ಜನವರಿ 10 ರಿಂದ 12ರವರೆಗೆ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆದಿದೆ. ಇದರಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯಿಂದ ಬಿ.ಶ್ರೀನಿವಾಸ್ (ತುಮಕೂರು), ಜೋಷಿ, ಪದ್ಮನಾಭ, ರಾಜಮೋನಿ (ದಕ್ಷಿಣ ಕನ್ನಡ) ಅವರು 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿ ಪದಕ ಪಡೆದಿದ್ದಾರೆ.
Advertisement
ವಿಶೇಷವಾಗಿ 400 ಮೀಟರ್ ಅಡೆತಡೆ ಓಟ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತುಮಕೂರಿನ ಬಿ.ಶ್ರೀನಿವಾಸ್ ಅವರು ಕಂಚಿನ ಪದಕವನ್ನು ಪಡೆದು ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶ್ರೀನಿವಾಸ್ ಅವರು ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯವರಾಗಿದ್ದು, ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Advertisement
ಇವರೆಲ್ಲರೂ ಮಾರ್ಚ್ ತಿಂಗಳಲ್ಲಿ ಥೈಲ್ಯಾಂಡ್‍ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.