ಬಹುನಿರೀಕ್ಷಿತ ಸಲಾರ್ ಸಿನಿಮಾದ ಟ್ರೈಲರ್ ಇಂದು ಸಂಜೆ 7.19ಕ್ಕೆ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಚಿತ್ರದ ನಿರ್ಮಾಪಕ ವಿಜಯ ಕಿರಗಂದೂರ್ (Vijay Kirgandur) ಟ್ರೈಲರ್ (Trailer) ಅನ್ನು ವೀಕ್ಷಣೆ ಮಾಡಿದ್ದು, ಟ್ರೈಲರ್ ಕಂಡು ಸಂಭ್ರಮಿಸಿದ್ದಾರೆ. ಆ ಫೋಟೋವನ್ನು ಅಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಅದ್ಭುತವಾದ ಟ್ರೈಲರ್ ಇದಾಗಿದ್ದು, ಮೂರೂವರೆ ನಿಮಿಷಕ್ಕೂ ಹೆಚ್ಚು ಅವಧಿಯ ಟ್ರೈಲರ್ ಇದಾಗಿದೆ.
ಸಲಾರ್ ರೀಮೇಕಾ?
ಸಲಾರ್ ಸಿನಿಮಾದ ಕಥೆಯ (Story) ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ (Prashant Neel) ಈ ಹಿಂದೆ ಕನ್ನಡದಲ್ಲಿ ಮಾಡಿದ್ದ ಉಗ್ರಂ ಸಿನಿಮಾವನ್ನೇ ಕೊಂಚ ಬದಲಿಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಪ್ರಶಾಂತ್ ನೀಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಪ್ರಶಾಂತ್ ಮಾತನಾಡಿದ್ದಾರೆ.
ಇದು ರಿಮೇಕ್ ಸಿನಿಮಾವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸ್ನೇಹಿತರಿಬ್ಬರು ದೊಡ್ಡ ಶತ್ರುಗಳಾಗಿ ಬದಲಾಗುವ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ ಎಂದಿದ್ದಾರೆ. ಈ ಇಬ್ಬರ ಜರ್ನಿಯನ್ನು ಎರಡು ಭಾಗವಾಗಿ ತೋರಿಸಲಾಗುವುದು ಎಂದು ಇದೇ ಮೊದಲ ಬಾರಿಗೆ ಕಥೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸದ್ಯ ಚಿತ್ರೋದ್ಯಮದಲ್ಲಿ ಇವೆಂಟ್ ಟ್ರೆಂಡ್ ಹೆಚ್ಚಾಗಿದೆ. ಪೋಸ್ಟ್ ರಿಲೀಸ್ ಇವೆಂಟ್, ಪ್ರಿ-ರಿಲೀಸ್ (Event) ಇವೆಂಟ್ ಹೀಗೆ ಜನರನ್ನು ಸೇರಿಸುವುದಕ್ಕಾಗಿ ನಾನಾ ರೀತಿಯ ಕಸರತ್ತುಗಳನ್ನು ಮಾಡಲಾಗುತ್ತದೆ. ಇಂಥದ್ದೊಂದು ಯಾವುದೇ ಇವೆಂಟ್ ಸಲಾರ್ ಚಿತ್ರಕ್ಕಾಗಿ ಮಾಡುತ್ತಿಲ್ಲ ಎನ್ನುವ ವಿಷಯ ಗಾಂಧಿನಗರದಲ್ಲಿ ಓಡಾಡುತ್ತಿದೆ. ಯಾವುದೇ ಇವೆಂಟ್ ಮಾಡದೇ, ಟ್ರೈಲರ್ ಬಿಡುಗಡೆ ನಂತರ ನೇರವಾಗಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆಯಂತೆ ಹೊಂಬಾಳೆ ಸಂಸ್ಥೆ.
ಸಲಾರ್ ಪ್ರಭಾಸ್ (Prabhas) ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ ಇದು ಕೆಜಿಎಫ್ (KGF) ನಿರ್ದೇಶಕನ ಸಿನಿಮಾ ಎನ್ನುವ ನಿರೀಕ್ಷೆ. ಕೆಜಿಎಫ್ ಅನ್ನೋ ದೃಶ್ಯಕಾವ್ಯ ಕೊಟ್ಟು ಸಿನಿಮಾ ಮೇಕಿಂಗ್ ಸ್ಟೈಲ್‌ಗೆ ಹೊಸ ಭಾಷ್ಯ ಬರೆದ ನಿರ್ದೇಶಕನ ಇನ್ನೊಂದು ಸಿನಿಮಾ ಕೊನೆಗೂ ಬರ್ತಿದೆ. ಕೆಜಿಎಫ್ ಹೇಗೆ ವಿಶ್ವದಗಲ ಬಾಹು ಹಸ್ತ ಚಾಚಿತ್ತೋ ಅದಕ್ಕಿಂತ ಹೆಚ್ಚಾಗಿ ಸಲಾರ್ ಅಜಾನುಬಾಹುವಾಗಿ ಹೊರಹೊಮ್ಮಲಿದೆ. ಹೊಂಬಾಳೆ ಸಂಸ್ಥೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡ ಪರಿಣಾಮ ಅಮೆರಿಕಾದಲ್ಲೂ ಮುಂಗಡ ಟಿಕೆಟ್ ಬುಕಿಂಗ್ ನಡೆಯುತ್ತಿದೆ.