ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಡಿಲೀಟ್ ಆಗಿದ್ದಕ್ಕೆ ನಿರ್ಮಾಪಕ ಸೂರಪ್ಪಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರಪ್ಪ ಅವರು, ಕೋಟಿಗೊಬ್ಬ-3 ಚಿತ್ರದ ಟೀಸರ್ ಯುಟ್ಯೂಬ್‍ನಿಂದ ಏಕೆ ಡಿಲೀಟ್ ಆಯ್ತು ಎಂದು ಕೇಳುತ್ತಿದ್ದರು. ಕೊರೊನಾ ವೈರಸ್‍ಗಿಂತ ಇದು ಜಾಸ್ತಿ ಸುದ್ದಿಯಾಗುತ್ತಿತ್ತು. ಪೋಲ್ಯಾಂಡ್‍ನಿಂದ ಶೂಟಿಂಗ್ ಆದ ಬಳಿಕ ಅಲ್ಲಿ ಸಹೋದರರಾದ ಸಂಜಯ್ ಪಾಲ್ ಹಾಗೂ ಅಜಯ್ ಪಾಲ್ ಇದ್ದರು. ಅವರು ಯಾರೆಂಬುದು ನನಗೆ ಗೊತ್ತಿರಲಿಲ್ಲ. ನನಗೆ ಯಾರೋ ಒಬ್ಬರು ಇಬ್ಬರು ಸಹೋದರರನ್ನು ಪರಿಚಯ ಮಾಡಿಸಿ ಅಲ್ಲಿ ಶೂಟಿಂಗ್ ಮಾಡೋಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಅವರು ಇಲ್ಲಿ ಹೋಗುವಾಗ ಆಡಿದ ಮಾತುಗಳನ್ನು ಅಲ್ಲಿ ಏನು ಮಾಡಿಕೊಟ್ಟಿಲ್ಲ. ಅವರಿಗೆ ಸಲ್ಲಬೇಕಾದ ಹಣವನ್ನು ನಮ್ಮ ಖಾತೆ ಮೂಲಕ ಕೊಟ್ಟಿದ್ದು, ಇದಕ್ಕೆ ನನ್ನ ಬಳಿ ದಾಖಲೆ ಇವೆ ಎಂದರು.
ಯುಟ್ಯೂಬ್‍ನಲ್ಲಿ ಈಗ ಯಾರು ಏನಾದರೂ ದೂರು ನೀಡಿದರೆ ತಕ್ಷಣ ಅದನ್ನು ಡಿಲೀಟ್ ಮಾಡುತ್ತದೆ ಎಂಬುದು ನನಗೆ ನಿನ್ನೆ ಗೊತ್ತಾಗಿದೆ. ಇದರ ವಿರುದ್ಧವಾಗಿ ಆನಂದ್ ಆಡಿಯೋ ಶ್ಯಾಮ್ ಅವರು ಕಾನೂನಿನ ಪ್ರಕಾರ ಕ್ರಮಕೈಗೊಂಡಿದ್ದಾರೆ. ನಿನ್ನೆ, ಮೊನ್ನೆ ಶನಿವಾರ, ಭಾನುವಾರ ಆಗಿದ್ದ ಕಾರಣ ಅದು ವರ್ಕ್ ಆಗಿಲ್ಲ ಎಂಬ ಕಾರಣದಿಂದ ಇಂದು ಸಂಜೆಯೊಳಗೆ ಟೀಸರ್ ಅಪ್ಲೋಡ್ ಆಗುತ್ತದೆ ಎಂದು ನನಗೆ ಭರವಸೆ ಕೊಟ್ಟಿದ್ದಾರೆ. ಯುಟ್ಯೂಬ್ ಎನ್ನುವಂತದ್ದು ಮಶಿನ್ ಆಗಿದ್ದು, ಮನುಷ್ಯರು ಅಲ್ಲಿ ಕೆಲಸ ಮಾಡಲ್ಲ ಎಂದು ಶ್ಯಾಮ್ ಅವರು ತಿಳಿಸಿದ್ದರು. ಮನುಷ್ಯರು ಕೆಲಸ ಮಾಡುವಂತಿದ್ದರೆ ಈ ಸಮಸ್ಯೆಯನ್ನು ಅಲ್ಲಿಯೇ ಹೋಗಿ ಸರಿಪಡಿಸಬಹುದಿತ್ತು. ಆದರೆ ಅದು ಆಗಲ್ಲ ಎಂದು ತಿಳಿಸಿದರು.
ಪಾಲ್ ಸಹೋದರರಿಂದ ಆದ ಅನ್ಯಾಯವನ್ನು ಪದೇ ಪದೇ ಹೇಳುತ್ತಾ ಕೋರ್ಟ್‍ಗೆ ಹೋಗುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾನಿಲ್ಲ. ನನ್ನ ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದು ಬ್ಯಾಕ್‍ಮೇಲ್ ಮಾಡಿದ್ದರು ಎಂಬುದು ಈ ಹಿಂದೆಯೇ ದಾಖಲೆಯೊಂದಿಗೆ ತೋರಿಸಿದ್ದೇನೆ. ಬಳಿಕ ನನ್ನ ಸಿಬ್ಬಂದಿಯನ್ನು ಕೇಂದ್ರ ಸಚಿವ ಸದಾನಂದ ಗೌಡ ಅವರ ಮೂಲಕ ಕರೆಸಿಕೊಂಡಿದ್ದೇವು. ಪಾಲ್ ಸಹೋದರರ ಮುಖಾಂತರ ನಾವು ಎಲ್ಲಾ ಲೋಕೇಶನ್‍ಗೆ ಹಣ ಕಟ್ಟಿದ್ದೇವೆ. ಆದರೆ ಈಗ ನನ್ನ ಸಂಬಂಧಪಟ್ಟವರಿಂದ ನನಗೆ ದುಡ್ಡು ಬಂದಿಲ್ಲ, ನಮ್ಮ ಲೋಕೇಶನ್ ಬಳಸಿಕೊಂಡಿದ್ದೀರಾ ಎಂದು ಪತ್ರ ಬರೆದು ಕಳುಹಿಸಿದ್ದರು ಎಂದು ಹೇಳಿದರು.
ಶೂಟಿಂಗ್ ಕಡೆ ದಿನ ಅಂದರೆ 95 ಲಕ್ಷ ರೂ. ಕೊಟ್ಟರೆ ಮಾತ್ರ ನಿಮ್ಮ ತಂಡವನ್ನು ಹೊರಗೆ ಕಳುಹಿಸುತ್ತೇನೆ ಎಂದಿದ್ದ ವ್ಯಕ್ತಿ ಕೊನೆ ಕ್ಷಣದಲ್ಲಿ ಅಕೌಂಟ್ ಎಲ್ಲಾ ನೋಡಿ 45 ಲಕ್ಷ ರೂ. ಕೇಳಿದ್ದಾನೆ. ಇದರಿಂದ ನನ್ನ ಅಕೌಂಟೆಂಟ್ ಹೆದರಿ ನನಗೆ ಕರೆ ಮಾಡಿ ಸರ್ ಹಣ ಕಳುಹಿಸಿಕೊಡಿ ಇವರು ನನ್ನ ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಆಗ ನಾನು ಜಗ್ಗೇಶ್ ಅವರ ಮುಖಾಂತರ ದೂರು ನೀಡಿ ಅಕೌಂಟೆಂಟ್‍ನನ್ನು ಹಾಗೆ ಕರೆದುಕೊಂಡು ಬಂದೇವು. ನನ್ನ ಲೆಕ್ಕದ ಪ್ರಕಾರ ನಾನು ಅವರಿಗೆ 45 ಲಕ್ಷ ರೂ. ಕೊಡುವಂತಿಲ್ಲ. ಆ ಹಣವನ್ನು ನಾನು ಕೋರ್ಟ್‍ನಲ್ಲಿ ಡೆಪಾಸಿಟ್ ಇಟ್ಟು ಕಾನೂನಿನ ಹೋರಾಟ ಕೈಗೊಳ್ಳುತ್ತೇನೆ. ಆ ಹಣ ಕೊಡುವಂತಿದ್ರೆ ನಾನು ಕೊಡುತ್ತೇನೆ ಎಂದು ಸೂರಪ್ಪ ಸ್ಪಷ್ಟನೆ ನೀಡಿದರು.