ರಾಜಾಹುಲಿ, ರಾಮ ಶಾಮ ಭಾಮ, ಜಮೀನ್ದಾರು, ಹೃದಯವಂತ, ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಕನ್ನಡದಲ್ಲಿ ಅದ್ದೂರಿ ಹಾಗೂ ಸದಭಿರುಚಿಯ ಚಿತ್ರಗಳನ್ನೇ ನಿರ್ಮಿಸುತ್ತ ಬಂದಿರುವ ನಿರ್ಮಾಪಕ ಕೆ.ಮಂಜು (K.Manju) ಇದೀಗ ಯುವ ನಿರ್ದೇಶಕ ಸ್ಮೈಲ್ ಶ್ರೀನು ಜೊತೆ ಕೈ ಜೋಡಿಸಿದ್ದಾರೆ. ಸ್ಮೈಲ್ ಶ್ರೀನು (Smile Sreenu) ಕೂಡ ಕನ್ನಡದಲ್ಲಿ ಯಶಸ್ವೀ ಚಿತ್ರಗಳನ್ನೇ ಮಾಡುತ್ತ ಬಂದವರು. ತೂಫಾನ್, ಬಳ್ಳಾರಿ ದರ್ಬಾರ್, 18 to 25, ಓ ಮೈ ಲವ್ ನಂಥ ಮಾಸ್ ಅಂಡ್ ಕ್ಲಾಸ್ ಚಿತ್ರಗಳನ್ನು ನಿರ್ದೇಶಿಸಿ, ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ತನ್ನದೇ ಆದ ಸ್ಥಾನ ಗಳಿಸಿದವರು. ಇದೀಗ ಈ ಇಬ್ಬರು ಅನುಭವಿಗಳು ಜೊತೆ ಸೇರಿರುವುದು ಚಿತ್ರಪ್ರೇಮಿಗಳಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.
Advertisement
ಕೆ.ಮಂಜು ಸಿನಿಮಾಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸುತ್ತಿರುವ ಕುರಿತಂತೆ ಮಾತನಾಡಿದ ನಿರ್ದೇಶಕ ಸ್ಮೈಲ್ ಶ್ರೀನು, ನಾವಿಬ್ಬರೂ ಸೇರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಒಂದು ಸಿನಿಮಾ ಮಾಡಬೇಕು ಅಂತ ಬಹಳ ದಿನಗಳಿಂದ ಅಂದುಕೊಂಡಿದ್ದೆವು. ಈ ಬಗ್ಗೆ ಸಾಕಷ್ಟು ಚರ್ಚಿಸಿ ಮಾತಾಡಿದ್ದೆವು. ಅದಕ್ಕೀಗ ಕಾಲ ಕೂಡಿಬಂದಿದೆ. ಇದೊಂದು ನ್ಯಾಷನಲ್ ಸಬ್ಜೆಕ್ಟ್ ಆಗಿದ್ದು, ಸಾಮಾಜಿಕ ಕಳಕಳಿ ಇರುವ, ಇಡೀ ಪ್ರಪಂಚಕ್ಕೇ ಗೊತ್ತಿರುವ ದೊಡ್ಡ ವ್ಯಕ್ತಿಯೊಬ್ಬರ ಬದುಕಿನ ನೈಜಘಟನೆ ಆಧಾರಿತವಾಗಿದ್ದು, ಸಧ್ಯ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ. ಆ ವ್ಯಕ್ತಿ ಯಾರು? ಹಾಗೂ ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುತ್ತೇವೆ.
Advertisement
Advertisement
ನಾನು ಈವರೆಗೆ ಉತ್ತಮ ಹಾಗೂ ಗುಣಮಟ್ಟದ ಸಿನಿಮಾಗಳನ್ನೇ ನಿರ್ದೇಶನ ಹಾಗೂ ನಿರ್ಮಾಣ ಮಾಡುತ್ತಾ ಬಂದಿದ್ದರೂ, ಅವುಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾರ್ಕೆಟಿಂಗ್ ಮಾಡಬೇಕು, ಚಿತ್ರಗಳನ್ನು ಯಾವ ರೀತಿ ಜನರಿಗೆ ತಲುಪಿಸಬೇಕು ಎಂಬುದನ್ನು ತಿಳಿದುಕೊಳ್ಳಲು ನನ್ನ ಚಿತ್ರಕ್ಕೆ ಅನುಭವಿ ನಿರ್ಮಾಪಕರು ಹಾಗೂ ಖ್ಯಾತ ವಿತರಕರೂ ಆದ ಕೆ. ಮಂಜು ಅವರು ಜೊತೆಯಾಗಿರುವುದು ನನಗೆ ಸಿಕ್ಕಂಥ ದೊಡ್ಡ ಸಪೋರ್ಟ್ ಹಾಗೂ ನನ್ನ ಅದೃಷ್ಟವೆಂದೇ ಹೇಳಬಹುದು ಎಂದಿದ್ದಾರೆ.
Advertisement
ಸದ್ಯ ನಿರ್ದೇಶಕರು ಸ್ಕ್ರಿಪ್ಟ್ ಹಂತದಲ್ಲಿ ತೊಡಗಿಕೊಂಡಿದ್ದು, ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ ಎಂದು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು. ಇದು ಕೆ.ಮಂಜು ಅವರ ನಿರ್ಮಾಣದ 44ನೇ ಚಿತ್ರವಾಗಿದ್ದು ಸದ್ಯದಲ್ಲೇ ಸೆಟ್ಟೇರಲಿದೆ.