– ಏನಿದು ಇಂಟರ್‌ಲಾಕ್ ಸಿಸ್ಟಮ್?
ನವದೆಹಲಿ: ಒಡಿಶಾ ರೈಲು ದುರಂತದ (Odisha Train Accident) ಪ್ರಾಥಮಿಕ ತನಿಖೆಯನ್ನು ಅಧಿಕಾರಿಗಳು ಪೂರೈಸಿದ್ದು, ವರದಿ ನೀಡಿದ್ದಾರೆ. ಇಂಟರ್‌ಲಾಕ್ ಸಿಸ್ಟಮ್ (Railway Interlock System) ಸಮಸ್ಯೆಯಿಂದಾಗಿ ಒಡಿಶಾ ರೈಲು ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.
ಈ ಬಗ್ಗೆ ಕಿರಿಯ ಅಧಿಕಾರಿಗಳು ಫೆಬ್ರವರಿ 9 ರಂದು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರಲಿಲ್ಲ. ಇದರಿಂದಾಗಿ ತೊಂದರೆ ಸಂಭವಿಸಿರುವ ಸಾಧ್ಯತೆಗಳ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು
ಅಪಘಾತ ಸ್ಥಳದಿಂದ ಎಲ್ಲಾ ಮೃತದೇಹಗಳನ್ನು ತೆಗೆದುಹಾಕಲಾಗಿದೆ. ಬುಧವಾರ ಬೆಳಿಗ್ಗೆಯಿಂದ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೋರಮಂಡಲ್ ಎಕ್ಸ್‍ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಠ 288 ಜನರು ಸಾವನ್ನಪ್ಪಿದ್ದರು. ದೇಶದ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಇದು ಒಂದಾಗಿದೆ. ಅಪಘಾತದಲ್ಲಿ 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರನ್ನು ಬಾಲಸೋರ್‍ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಏನಿದು ಇಂಟರ್‌ಲಾಕ್ ಸಿಸ್ಟಮ್?
ರೈಲು ಯಾವ ನಿಲ್ದಾಣಕ್ಕೆ ಯಾವ ಟ್ರ್ಯಾಕ್ ಮೂಲಕ ಹೋಗಬೇಕೆಂದು ಇಂಟರ್‌ಲಾಕ್ ಸಿಸ್ಟಮ್ ಮೂಲಕ ನಿರ್ಧಾರ ಮಾಡಲಾಗುತ್ತದೆ. ಮಾರ್ಗ ಬದಲಾವಣೆಯನ್ನು ಸಹ ಇಂಟರ್‌ಲಾಕ್ ಸಿಸ್ಟಮ್ ಮೂಲಕವೇ ಮಾಡಲಾಗುತ್ತದೆ. ಹಳಿಯಿಂದ ಹಳಿಗೆ ರೈಲು ಸಂಚಾರ ಮಾರ್ಗವನ್ನು ಬದಲಾಯಿಸಲು ಇಂಟರ್‌ಲಾಕ್ ಸಿಸ್ಟಮ್ ಕೆಲಸ ನಿರ್ವಹಿಸುತ್ತದೆ. ಇದನ್ನೂ ಓದಿ: ಒಡಿಶಾ ರೈಲು ದುರಂತಕ್ಕೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ: ಪ್ರಧಾನಿ ಮೋದಿ