ಕಲಬುರಗಿ: ಪ್ರೊಬೇಷನರಿ ಸಬ್ ಇನ್ಸ್‌ಪೆಕ್ಟರ್ ನೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಬಸವರಾಜ್ ಶಂಕ್ರಪ್ಪ ಮೃತ ಪ್ರೊಬೇಷನರಿ ಸಬ್ ಇನ್ಸ್‌ಪೆಕ್ಟರ್. ಇವರು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ನಿವಾಸಿಯಾಗಿದ್ದು, ನಗರದ ರಾಮಮಂದಿರ ಸರ್ಕಲ್ ಬಳಿಯಿರುವ ಅಪಾರ್ಟ್ ಮೆಂಟ್ ಮುಂಭಾಗದಲ್ಲಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬಸವರಾಜ್ ಕಳೆದ 9 ತಿಂಗಳಿನಿಂದ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ತರಬೇತಿ ಮಾಡುತ್ತಿದ್ದರು. ಶನಿವಾರ ಸಂಜೆ ಹುಷಾರಿಲ್ಲವೆಂದು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ತಡರಾತ್ರಿ ತರಬೇತಿ ಕೇಂದ್ರದಲ್ಲಿ ರೋಲ್ ಕಾಲ್ ಮಾಡುವಾಗಲು ಕೂಡ ವಾಪಸ್ ಬಾರದೆ ಇದ್ದಾಗ ಅನುಮಾನಗೊಂಡ ತರಬೇತಿ ಕೇಂದ್ರದ ಸಿಬ್ಬಂದಿ, ಬಸವರಾಜ್ ಮನೆಯವರನ್ನ ಸಂಪರ್ಕ ಮಾಡಿದ್ದಾರೆ.
ಈ ವೇಳೆ ಬಸವರಾಜ್ ಮನೆಗೆ ತೆರಳದೆ ಇರುವ ವಿಚಾರ ಬೆಳಕಿಗೆ ಬಂದಿದೆ. ಆದರೆ ರಾತ್ರಿ ರಾಮಂದಿರ ಕಾಂಪ್ಲೆಕ್ಸ್ ಬಳಿ ಬಸವರಾಜ್ ಬಿದ್ದಿದ್ದು, ಬೆಳಗ್ಗೆವರೆಗೂ ಕೂಡ ಅಲ್ಲೆ ಬಿದ್ದಿದ್ದರು ಎಂದು ಹೇಳಲಾಗುತ್ತಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ರಾಮಮಂದಿರ ಸರ್ಕಲ್ ಬಳಿಯಿದ್ದ ಅಂಗಡಿಯವರು ಅಂಗಡಿ ಓಪನ್ ಮಾಡಿದಾಗ ನೆಲದಲ್ಲೇ ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ಆದರೆ ಯಾರೋ ಕುಡಿದು ಬಿದ್ದರಬೇಕು ಅಂತ ಸುಮ್ಮನಾಗಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ನೋಡಿದಾಗ ತರಬೇತಿ ಪಡೆಯುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv