ಮಂಗಳೂರು: ಬಿಜೆಪಿ (BJP) ಆಡಳಿತದ ಸಮಯದಲ್ಲಿ ಆರಂಭವಾಗಿದ್ದ ಧರ್ಮ ದಂಗಲ್ ಕಾಂಗ್ರೆಸ್ (Congress) ಅವಧಿಯಲ್ಲೂ ಮುಂದುವರಿದಂತೆ ಕಾಣ್ತಿದೆ. ಸರ್ಕಾರ ಬಂದ್ರೆ ಅಲ್ಪಸಂಖ್ಯಾತರ ಹಿತ ಕಾಪಾಡುವ ಭರವಸೆ ನೀಡಿದ ಕಾಂಗ್ರೆಸ್ ವ್ಯಾಪಾರಿಗಳ ಹಿತ ಕಾಯುವಲ್ಲಿ ವಿಫಲವಾಗಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ. ಜಾತ್ರೆಗಳು ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ (Karavali) ಮತ್ತೆ ಮುಸ್ಲಿಂ ವ್ಯಾಪಾರಿಗಳಿಗೆ (Muslim Traders) ಬಹಿಷ್ಕಾರ ಹಾಕಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ರಾಜ್ಯದ ಹಲವೆಡೆ ವ್ಯಾಪಾರ ಧರ್ಮ ದಂಗಲ್ ಜೋರಾಗಿಯೇ ನಡೆದಿತ್ತು. ಪ್ರಮುಖವಾಗಿ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿತ್ತು. ಉಡುಪಿಯಲ್ಲಿ ಆರಂಭವಾಗಿದ್ದ ಧರ್ಮ ದಂಗಲ್ ಇಡೀ ರಾಜ್ಯಕ್ಕೆ ವ್ಯಾಪಿಸಿತ್ತು. ಇದೀಗ ಡಿಸೆಂಬರ್ 14ರಂದು ನಡೆಯುವ ಮಂಗಳೂರಿನ ಕುಡುಪು ಶ್ರೀಅನಂತಪದ್ಮನಾಭ (Kudupu Shree Anantha Padmanabha Temple) ಕ್ಷೇತ್ರದ ಚಂಪಾ ಷಷ್ಠಿ ಮಹೋತ್ಸವದಲ್ಲೂ ಅನ್ಯ ಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರಬೇಕೆಂಬ ಆರೋಪ ಕೇಳಿಬಂದಿದೆ.
ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿರೋದ್ರಿಂದ ಇಲಾಖೆಯ ಸುತ್ತೋಲೆಯಂತೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ. ಹೀಗಾಗಿ ಕ್ಷೇತ್ರದ ಆಡಳಿತ ಮಂಡಳಿ ಈ ಬಾರಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಕೊಟ್ಟಿಲ್ಲ. ಕ್ಷೇತ್ರದ ಈ ನಿರ್ಧಾರವನ್ನು ಹಿಂದೂಪರ ಸಂಘಟನೆಗಳು ಸ್ವಾಗತಿಸಿದೆ. ದೇವಸ್ಥಾನದ ಸುತ್ತಮುತ್ತ ಇರುವ ಜಾಗವೆಲ್ಲಾ ಕ್ಷೇತ್ರದ್ದು, ಜೊತೆಗೆ ಮುಂದೆ ಇರೋ ರಸ್ತೆಯೂ ದೇವಸ್ಥಾನದ ರಥಬೀದಿ. ಹೀಗಾಗಿ ಈ ಜಾಗದಲ್ಲಿ ಬಿಟ್ಟು ಬೇರೆ ಜಾಗದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ಮಾಡೋದಕ್ಕೆ ನಮ್ಮ ಆಕ್ಷೇಪ ಇಲ್ಲ ಎಂದು ಹಿಂದೂ ಸಂಘಟನೆಗಳು ಸ್ಪಷ್ಟಪಡಿಸಿದೆ.
ಸುಮಾರು 50, 60 ವರ್ಷಗಳಿಂದ ಕುಡುಪು ಕ್ಷೇತ್ರದಲ್ಲಿ ನಡೆಯೋ ಜಾತ್ರೆಯಲ್ಲಿ ಸರ್ವ ಧರ್ಮೀಯರೂ ವ್ಯಾಪಾರ ನಡೆಸೋ ಮೂಲಕ ಸೌಹಾರ್ಧವಾಗಿ ನಡೆಯುತ್ತಿತ್ತು. ಕಳೆದ ವರ್ಷ ಧರ್ಮದಂಗಲ್ ಜೋರಾಗಿದ್ದ ಕಾರಣ ಅನ್ಯ ಮತೀಯರು ಇಲ್ಲಿ ವ್ಯಾಪಾರಕ್ಕೆ ಮುಂದಾಗಿರಲಿಲ್ಲ. ಆದ್ರೆ ಈ ಬಾರಿ ಕಾಂಗ್ರೆಸ್ ಸರ್ಕಾರವಿದ್ದರೂ ಹಿಂದೂ ಸಂಘಟನೆಗಳು ಮತ್ತೆ ಅಪಸ್ವರ ಎತ್ತಿವೆ.
ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ ಹಾಗೂ ದೇವಸ್ಥಾನಕ್ಕೆ ಸೇರಿದ್ದ ಜಾತ್ರಾ ಗದ್ದೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ನಿಜ. ಆದ್ರೆ ದೇವಸ್ಥಾನದ ಜಾತ್ರಾ ವ್ಯಾಪಾರ ಸರ್ಕಾರಿ ಜಮೀನಿನಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಆಗೋದಾದ್ರೆ ಈ ಕಾನೂನು ಅನ್ವಯ ಆಗೋದಿಲ್ಲ. ಈ ಧರ್ಮ ದಂಗಲ್ ಮತ್ತೆ ತಾರಕಕ್ಕೇರುತ್ತಾ? ಅನ್ನೋದನ್ನು ಕಾದು ನೋಡಬೇಕಿದೆ.