ಚಾಮರಾಜನಗರ: ಇತ್ತೀಚೆಗೆ ತಮಿಳುನಾಡಿನಲ್ಲಿ ಪಾರ್ಕಿಂಗ್ ಕುರಿತು ನಮ್ಮ ರಾಜ್ಯದ ಬಸ್ ತಡೆದು ಗಲಾಟೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಎಚ್ಚೆತ್ತುಕೊಂಡಿವೆ. ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ, ಲಾಠಿ ಹಿಡಿದು ಪ್ರತಿಭಟನೆ ನಡೆಸಿದರು.
ಚಾಮರಾಜನಗರದ ಚಾಮರಾಜೇಶ್ವರ ಪಾರ್ಕ್ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಲಾಠಿ ಹಿಡಿದು ಪ್ರತಿಭಟನೆ ನಡೆಸಿದರು. ಪ್ರವಾಸಕ್ಕೆಂದು ತೆರಳುವ ಕನ್ನಡಿಗರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಯುತ್ತಿರುವುದು ಖಂಡನಾರ್ಹ. ಇದನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Advertisement
Advertisement
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರಿಸಿದರೆ ರಾಜ್ಯದಲ್ಲಿ ನಾವು ಕೈಕಟ್ಟಿ ಕೂರುವುದಿಲ್ಲ. ತಮಿಳುನಾಡು ಸರ್ಕಾರ ಅಲ್ಲಿರುವ ಕನ್ನಡಿಗರಿಗೆ ಹಾಗೂ ಕರ್ನಾಟಕದಿಂದ ತೆರಳುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
Advertisement
ಇತ್ತೀಚೆಗೆ ರಾಜ್ಯದ ಬಸ್ ತಮಿಳುನಾಡು ಪ್ರವಾಸಕ್ಕೆ ತೆರಳಿದಾಗ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿತ್ತು. ಅಲ್ಲದೆ ಬಸ್ ಮೇಲೆ ಕನ್ನಡದ ಬಾವುಟ ಇದ್ದಿದ್ದಕ್ಕೆ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕೇರಳದಲ್ಲಿಯೂ ಇದೇ ರೀತಿಯ ಪ್ರಕರಣ ನಡೆದಿತ್ತು. ಕನ್ನಡ ಬಾವುಟ ಇದ್ದಿದ್ದಕ್ಕೆ ರಾಜ್ಯದೊಳಗೆ ವಾಹನ ಬಿಡುವುದಿಲ್ಲ ಎಂದು ಕೇರಳ ಪೊಲೀಸರು ವಾಹನ ತಡೆದಿದ್ದರು. ಇದಾದ ನಂತರ ಎಲ್ಲ ಟ್ರಾವೆಲ್ಸ್ ವಾಹನಗಳಿಗೂ ಕನ್ನಡ ಬಾವುಟ ಕಟ್ಟಿ ಕೇರಳ ಪ್ರವೇಶಿಸುವ ಮೂಲಕ ಚಾಲಕರು ಕ್ರಾಂತಿ ಎಬ್ಬಿಸಿದ್ದರು. ಇದು ರಾಜ್ಯದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿತ್ತು. ಆಗಿನಿಂದ ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಂಡು ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿವೆ.