ಬೆಂಗಳೂರು: ಕನ್ನಡಪರ ಸಂಘಟನೆಯ ಉಪಾಧ್ಯಕ್ಷನೋರ್ವ ಮಹಿಳೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಪಾಲಾಗಿರುವ ಘಟನೆ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮುರಳಿ ಅಲಿಯಾಸ್ ಜಿಮ್ ಮುರಳಿ ಜೈಲು ಪಾಲಾದ ಮಹದೇವಪುರ ವಲಯ ಜಯಕರ್ನಾಟಕ ಸಂಘದ ಉಪಾಧ್ಯಕ್ಷ. ಸೆಪ್ಟೆಂಬರ್ 22 ರಂದು ಹೂಡಿಯ ಬಸವನಗರ ಮುಖ್ಯರಸ್ತೆಯ ಮಹಿಳೆಯರು ವಾಸವಿದ್ದ ಮನೆಗೆ ನುಗ್ಗಿದ್ದ ಮುರಳಿ ದೌರ್ಜನ್ಯ ಎಸಗಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಲು ಮುಂದಾಗಿದ್ದಾನೆ. ಈ ವೇಳೆ ಮಹಿಳೆಯರು ಕೂಗಾಡಿದಾಗ ಅಕ್ಕಪಕ್ಕದವರು ಬರುತ್ತಾರೆ ಎಂಬ ಭಯದಲ್ಲಿ ಮುರಳಿ ಮೊದಲನೇ ಮಹಡಿಯಿಂದ ರಸ್ತೆಗೆ ಹಾರಿ ಎಸ್ಕೇಪ್ ಆಗಿದ್ದಾನೆ. ಮುರಳಿ ಮಹಡಿಯಿಂದ ಹಾರಿ ಪರರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
Advertisement
ಯುವತಿಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮುರಳಿ ಅವರನ್ನು ಹಿಂಬಾಲಿಸುತ್ತಿದ್ದ. ಅಲ್ಲದೆ ಘಟನೆ ನಡೆದ ದಿನ ಯುವತಿಯರು ವಾಸವಿದ್ದ ಕಟ್ಟಡದ ಬಳಿ ಅವಿತುಕೊಂಡು ಯುವತಿಯರು ಒಳ ಹೋಗುವುದನ್ನು ನೋಡಿದ್ದ. ಇದರಿಂದಾಗಿ ಈತನ ಕಾಟದಿಂದ ಬೇಸತ್ತ ಯುವತಿಯರು ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮುರಳಿಯನ್ನ ಬಂಧಿಸಿದ ಮಹದೇವಪುರ ಪೊಲೀಸರು ಜೈಲಿಗೆ ಕಳಿಸಿದ್ದಾರೆ.