ಬೆಂಗಳೂರು: ಪೌರತ್ವ ಕಾಯಿದೆ ಹಾಗೂ ಎನ್.ಆರ್.ಸಿ. ಬೆಂಬಲಿಸಿ ಬೃಹತ್ ತಿರಂಗಾ ರ‍್ಯಾಲಿಯನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು.
ಸುಮಾರು 1500 ಕ್ಕೂ ಅಧಿಕ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ನಂತರ ಬೃಹತ್ ಸಮಾರೋಪ ಸಮಾರಂಭದಲ್ಲಿ ನಟಿ, ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಪಾಲ್ಗೊಂಡಿದ್ದರು. ನೆಲಮಂಗಲ ನಗರದ ಬಸವಣ್ಣದೇವರ ಮಠದಿಂದ ಮೆರವಣಿಗೆ ಆರಂಭವಾಗಿ, ಬಿ.ಹೆಚ್. ರಸ್ತೆಯ ಮೂಲಕ ಹಾದು ಹೋಗಿ ನಂತರ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಯಿತು.
ಸಿಎಎ ಮತ್ತು ಎನ್.ಆರ್.ಸಿ. ಕಾಯಿದೆಗಳನ್ನು ಬೆಂಬಲಿಸುವಂತೆ ಮೆರವಣಿಗೆಯಲ್ಲಿ ಜೈಕಾರ ಕೂಗಿದ ವಿದ್ಯಾರ್ಥಿಗಳು, ನಂತರ ಭಿತ್ತಿ ಫಲಕಗಳನ್ನು ಹಿಡಿದು, ನಾಗರಿಕರಲ್ಲಿ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಸುಮಾರು 500 ಅಡಿ ಉದ್ದದ ಭಾವುಟ ಹಿಡಿದ ವಿದ್ಯಾರ್ಥಿಗಳು, ನಂತರ ಸಮಾರೋಪ ಸಮಾರಂಭದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಮಾಳವಿಕಾ ಅವಿನಾಶ್, ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ, ಕಾಯಿದೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದರು. ಈ ವೇಳೆಯಲ್ಲಿ ಎಬಿವಿಪಿ ಸಂಘಟನೆಯ ಜಿಲ್ಲಾ ಪ್ರಮುಖ ಭರತ್, ತಾಲೂಕು ಘಟಕದ ಸಂತೋಷ್, ಪ್ರಾಂಶುಪಾಲರಾದ ರೇಖಾ ದೊಡ್ಡೇರಿ, ದಿನೇಶ್, ಉಪನ್ಯಾಸಕ ವರ್ಗ ಸೇರಿದಂತೆ ಭಾಗವಹಿಸಿದ್ದರು. ಮೆರವಣಿಗೆಗೆ ನೆಲಮಂಗಲ ಡಿವೈಎಸ್‍ಪಿ ಮೋಹನ್ ಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ, ಪಿ.ಎಸೈ ಕೃಷ್ಣಕುಮಾರ್, ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.