ನವದೆಹಲಿ: ಸಂಸದ ಕೆಎಚ್ ಮುನಿಯಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪಿಗಳಿವೇ ವಿನಃ, ಕ್ಷೇತ್ರದಲ್ಲಿ ಅವರಿಂದ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಆದ್ದರಿಂದ ಅವರಿಗೆ ಯಾವುದೇ ಕಾರಣಕ್ಕೂ ಈ ಬಾರಿ ಪಕ್ಷ ಟಿಕೆಟ್ ಕೊಡಬಾರದು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೆಹಲಿಯಲ್ಲೇ ಬಿಡು ಬಿಟ್ಟಿದ್ದು, ಹೈಕಮಾಂಡ್‍ಗೆ ಒತ್ತಡ ಹಾಕುವ ಮೂಲಕ ಹಾಲಿ ಕೆಎಚ್ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ. ಈಗಾಗಲೇ ಪಕ್ಷದ ಹಿರಿಯ ನಾಯಕ ಗುಲಾಂನಬೀ ಅಜಾದ್, ಅಹ್ಮದ್ ಪಟೇಲ್ ಹಾಗು ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್‍ರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದ ಶಾಸಕರ ತಂಡ ಮುನಿಯಪ್ಪ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹಾಕಿದ್ದು, ಜಾತಿಗಳನ್ನು ಒಡೆದು ಸಂಸದ ಕೆ.ಹೆಚ್ ಮುನಿಯಪ್ಪ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಮುಳಬಾಗಿಲು ಶಾಸಕ ನಾಗೇಶ್ ಹಾಗೂ ಮಾಜಿ ಶಾಸಕ ಕೊತ್ತನೂರು ಮಂಜುನಾಥ್, ಮುನಿಯಪ್ಪ ಅವರಿಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ ಕೆಲಸ ಮಾಡುವ ಎಚ್ಚರಿಕೆ ಕೊಟ್ಟರು. ಅಲ್ಲದೇ ಬಲಗೈ ನಾಯಕರ ಪೈಕಿ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಅವರು ಕ್ಷೇತ್ರದಲ್ಲಿ ಸ್ವರ್ಧೆಗೆ ಆಸಕ್ತಿ ತೋರಿದ್ದು ಅವರನ್ನು ಕಣಕ್ಕಿಳಿಸುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೇ ಕೆಎಚ್ ಮುನಿಯಪ್ಪ ವಿರುದ್ಧ ನಾವು ಅನಿವಾರ್ಯವಾಗಿ ಅವರ ವಿರುದ್ಧವೇ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಎಚ್ ಮುನಿಯಪ್ಪ ಅವರು, ನನ್ನ ಮೇಲೆ ಮಾಡಿರುವ ಆರೋಪಗಳು ರಾಜಕೀಯ ಹಿನ್ನೆಲೆಯಲ್ಲಿ ಮಾತ್ರ. ಆದರೆ ಈ ಬಗ್ಗೆ ನಾನು ಅವರಿಗೆ ಉತ್ತರ ಕೊಡಬೇಕಾಗಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡಿದ ವೇಳೆ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ತಮ್ಮ ಆರೋಪ ಮಾಡಿದವರಿಗೆ ತಿರುಗೇಟು ನೀಡಿದರು.
ಹೈಕಮಾಂಡ್ ಬಳಿ ನಾನು ಚರ್ಚೆ ನಡೆಸಿದ್ದು, ಹಾಲಿ 10 ಸಂಸದರಿಗೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇವೆ. ಹೈಕಮಾಂಡ್ ಯಾವುದೇ ನಿರ್ಣಯ ಕೈಗೊಂಡರು ಕೂಡ ನಾನು ಬದ್ಧರಾಗಿರುತ್ತೇನೆ. ಒಬ್ಬ ರೈತನ ಮಗನಾಗಿ ನಾನು ಇಲ್ಲಿಯವರೆಗೂ ಬಂದಿದ್ದೇನೆ. ಆದ್ದರಿಂದಲೇ ನನ್ನ ಮೇಲೆ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ ಅಷ್ಟೇ. ಚುನಾವಣಾ ಸಮಯದಲ್ಲಿ ಇದು ಸಾಮಾನ್ಯ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಲಿದೆ. ರಾಹುಲ್ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು, ಅವರು ಎಲ್ಲಿಯೇ ನಿಂತರು ಅವರನ್ನು ಗೆಲ್ಲಿಸಿ ಕಳುಹಿಸಿರುವ ಸಾಮಥ್ರ್ಯವಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv