ಕ್ಯಾಚ್ ಹಿಡಿಯಲು ಬಾರದೇ ಗುರುತ್ವಾಕರ್ಷಣೆ, ಓಲಾ, ಊಬರ್ ದೂಷಿಸಬೇಡಿ- ಪ್ರಿಯಾಂಕ ಗಾಂಧಿ

Public TV
2 Min Read
Priyanka Gandhi 1

– ಸೀತಾರಾಮನ್, ಗೋಯಲ್‍ಗೆ ಟಾಂಗ್

ನವದೆಹಲಿ: ಆರ್ಥಿಕ ಹಿಂಜರಿತದ ಕುರಿತು ಕೇಂದ್ರ ಸಚಿವರು ನೀಡಿದ್ದ ಹೇಳಿಕೆಗಳಿಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ತಿರುಗೇಟು ನೀಡಿದ್ದು, ವಿಭಿನ್ನ ಟ್ವೀಟ್ ಮಾಡುವ ಮೂಲಕ ಕಿಚಾಯಿಸಿದ್ದಾರೆ.

ಆಟೋ ಇಂಡಸ್ಟ್ರಿಗಳ ವಹಿವಾಟು ಕುಸಿತಕ್ಕೆ ಓಲಾ, ಊಬರ್‍ನಂತಹ ಟ್ಯಾಕ್ಸಿಗಳೇ ಕಾರಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದರು. ರೈಲ್ವೇ ಸಚಿವ ಪಿಯೂಷ್ ಗೋಯಲ್ ಗುರುವಾರ ಪ್ರತಿಕ್ರಿಯಿಸಿ, ಬೆಳವಣಿಗೆಯನ್ನು ಸೂಚಿಸುವ ಸಂದರ್ಭದಲ್ಲಿ ಗಣಿತವನ್ನು ಪರಿಗಣಿಸಬಾರದು. ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಆಲ್ಬರ್ಟ್ ಐನ್‍ಸ್ಟೈನ್ ಸಹ ಗಣಿತವನ್ನು ಬಳಸಲಿಲ್ಲ ಎಂದು ಹೇಳುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದರು. ಏಕೆಂದರೆ ಗುರುತ್ವಾಕರ್ಷಣೆಯ ಪರಿಕಲ್ಪನೆಯನ್ನು ಆಲ್ಬರ್ಟ್ ಐನ್‍ಸ್ಟೈನ್ ಕಂಡುಹಿಡಿದಿರಲಿಲ್ಲ, ಬದಲಿಗೆ ಐಸಾಕ್ ನ್ಯೂಟನ್ ಕಂಡುಹಿಡಿದಿದ್ದಾರೆ.

ಇದೀಗ ಪ್ರಿಯಾಂಕ ಗಾಂಧಿ ಈ ಹೇಳಿಕೆಗಳಿಗೆ ಟಕ್ಕರ್ ನೀಡಿದ್ದು, ಕ್ರಿಕೆಟ್‍ನ ವಿಡಿಯೋವನ್ನು ಟ್ವೀಟ್ ಮಾಡಿ, ಸರಿಯಾಗಿ ಕ್ಯಾಚ್ ಹಿಡಿಯಲು ಬಾಲ್ ಮೇಲೆ ಕಣ್ಣಿಡುವುದು, ಆಟದ ಸಾರವನ್ನು ಅರ್ಥಮಾಡಿಕೊಂಡಿರುವುದು ಬಹಳ ಮುಖ್ಯ. ಇಲ್ಲವಾದಲ್ಲಿ ನೀವು ಗುರುತ್ವಾಕರ್ಷಣೆ, ಗಣಿತ, ಓಲಾ, ಊಬರ್ ಗಳನ್ನೇ ದೂಷಿಸುತ್ತೀರಿ ಎಂಬ ಸಾಲುಗಳನ್ನು ಬರೆದಿದ್ದಾರೆ.

ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ದೇಶದ ಅಟೋಮೊಬೈಲ್ ಕ್ಷೇತ್ರದ ಕುಸಿತಕ್ಕೆ ಹಲವಾರು ಕಾರಣಗಳಿವೆ. ಇದರಲ್ಲಿ ಹೊಸ ತಲೆಮಾರಿನ ಜನ ವಾಹನಗಳನ್ನು ಖರೀದಿಸಲು ಹೋಗುತ್ತಿಲ್ಲ. ಇದರ ಜೊತೆಗೆ ಬಿಎಸ್6(ಭಾರತ್ ಸ್ಟೇಜ್ 6) ಮಾನದಂಡವೂ ಕಾರಣ. ಹೊಸ ಪೀಳಿಗೆಯ ಜನ ಇಎಂಐ ಮೂಲಕ ವಾಹನ ಖರೀದಿಸುವ ಆಲೋಚನೆಯನ್ನು ಬಿಟ್ಟು ಓಲಾ, ಉಬರ್ ಅಥವಾ ಮೆಟ್ರೋ ಸೇವೆಯನ್ನು ಹೆಚ್ಚು ಬಳಸುತ್ತಿದ್ದಾರೆ. ದೇಶದ ಅಟೋಮೊಬೈಲ್ ಉದ್ಯಮ ಕುಸಿತಕ್ಕೆ ಹೊಸ ಪೀಳಿಗೆಯ ಜನತೆಯಲ್ಲಿನ ಬದಲಾದ ಚಿಂತನೆಯೇ ಕಾರಣ. ಓಲಾ, ಉಬರ್ ನಂತಹ ಸೇವೆಗಳನ್ನು ಹೊಸ ಪೀಳಿಗೆಯ ಜನತೆ ಬಳಸುತ್ತಿರುವುದಿರಂದ ದೇಶದಲ್ಲಿ ಅಟೋಮೊಬೈಲ್ ಕ್ಷೇತ್ರದ ಕುಸಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇದನ್ನು ಓದಿ: ಗಮನಿಸಿ, 2020 ರಿಂದ ಬಿಎಸ್4 ವಾಹನಗಳ ಮಾರಾಟ ರದ್ದು

ಸಾರ್ವಜನಿಕರ ಹಿತಕ್ಕಾಗಿ ಆರ್ಥಿಕತೆ ಎಂದು ಜಾಹೀರಾತಿನ ಸಾಲನ್ನು ಸಹ ಬರೆದು ಟಾಂಗ್ ನೀಡಿದ್ದಾರೆ. ಸೀತಾರಾಮನ್ ಅವರ ಓಲಾ, ಊಬರ್ ಹೇಳಿಕೆಯನ್ನು ಈ ಹಿಂದೆ ಕಾಂಗ್ರೆಸ್ ಕಟುವಾಗಿ ಟೀಕಿಸಿತ್ತು. ಇದು ಆಡಳಿತದಲ್ಲಿ ಬಿಜೆಪಿಯ ‘ಅಸಮರ್ಥತೆ, ಅಪಕ್ವತೆ ಹಾಗೂ ಅನುಭವ ಇಲ್ಲದಿರುವುದನ್ನು ಪ್ರತಿಬಿಂಬಿಸುತ್ತದೆ’ ಎಂದು ಕಿಡಿಕಾರಿತ್ತು.

ಪಿಯೂಷ್ ಗೋಯಲ್ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ತಿರುಗೇಟು ನೀಡಿ, ಐನ್‍ಸ್ಟೈನ್ ಗುರುತ್ವಾಕರ್ಷನೆಯನ್ನು ಕಂಡುಹಿಡಿದರೆ, ನ್ಯೂಟನ್ ಏನು ಕಂಡುಹಿಡಿದರು? ಎಂದು ಪ್ರಶ್ನಿಸಿತ್ತು. ಸೀತಾರಾಮನ್ ಹಾಗೂ ಪಿಯೂಷ್ ಗೋಯಲ್ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು.

ಸತತ 8 ತಿಂಗಳಿನಿಂದ ಅಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಇಳಿಕೆ ಆಗುತ್ತಿದ್ದು ಆಗಸ್ಟ್ ತಿಂಗಳಿನಲ್ಲೂ ಮುಂದುವರಿದಿದೆ. ಆಗಸ್ಟ್ ತಿಂಗಳಿನಲ್ಲಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆಯಾಗಿದ್ದು 1997-98ರ ನಂತರ ಅತಿ ಕಡಿಮೆ ಪ್ರಯಾಣಿಕ ವಾಹನ ಮಾರಾಟವಾದ ತಿಂಗಳು ಎಂಬ ಕೆಟ್ಟ ಇತಿಹಾಸವನ್ನು ಬರೆದಿದೆ. ಇದನ್ನು ಓದಿ: ಕುಸಿದ ಅಟೋಮೊಬೈಲ್ ಕ್ಷೇತ್ರ – ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ 

2018ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಪ್ರಯಾಣಿಕ ವಾಹನಗಳ ಮಾರಾಟ ಶೇ.31.57 ಕುಸಿತ ದಾಖಲಿಸಿದೆ. 2018ರ ಆಗಸ್ಟ್ ತಿಂಗಳಿನಲ್ಲಿ 2,87,198 ಪ್ರಯಾಣಿಕ ವಾಹನಗಳು ಮಾರಾಟಗೊಂಡರೆ ಕಳೆದ ತಿಂಗಳು ಒಟ್ಟು 1,96,524 ವಾಹನಗಳು ಮಾರಾಟಗೊಂಡಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ತಿಂಗಳ ವರದಿಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *