ಲಕ್ನೋ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಸದ್ಯ ಮಿಷನ್-2022ಗಾಗಿ ಕೆಲಸ ಮಾಡುತ್ತಿದ್ದಾರೆ. ಪೂರ್ವ ಉತ್ತರ ಪ್ರದೇಶದ ಉಸ್ತುವಾರಿಯಾಗಿರುವ ಪ್ರಿಯಾಂಕ ಗಾಂಧಿ 2022ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ್ದು, ಮನೆಯನ್ನು ಸಹ ಹುಡುಕುತ್ತಿದ್ದಾರೆ.
ಲೋಕಸಭಾ ಚುನಾವಣೆಯಿಂದ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ಪ್ರಿಯಾಂಕ ಗಾಂಧಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಾ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ಜವಾಬ್ದಾರಿಯನ್ನು ಹೈಕಮಾಂಡ್ ಪ್ರಿಯಾಂಕ ಅವರಿಗೆ ನೀಡಿದೆ. ಹೀಗಾಗಿ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಪ್ರಿಯಾಂಕ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಮನೆಯಲ್ಲಿ ಕಾರ್ಯಕ್ರಮ ನಡೆಸಲು, ಸಾಲು ಸಾಲು ಸಭೆಗಳನ್ನು ನಡೆಸಲು ಮತ್ತು ಕಾರ್ಯಕರ್ತರಿಗೆ ವಿಶ್ರಾಂತಿಗೆ ಅನುಕೂಲವಾಗುವಂತಹ ಬೃಹತ್ ಮನೆಯ ಹುಡುಕುವಂತೆ ಪ್ರಿಯಾಂಕ ಸೂಚಿಸಿದ್ದಾರೆ. ಸ್ಥಳೀಯ ಕೈ ಮುಖಂಡರು ಕೆಲವು ಮನೆಗಳನ್ನು ತೋರಿಸಿದ್ದು, ಪ್ರಿಯಾಂಕ ಗಾಂಧಿ ಒಪ್ಪಿಗೆ ಸೂಚಿಸಬೇಕಿದೆ. ಲಕ್ನೋ ನಗರದ ನಾರಾಯಣ ರಸ್ತೆಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ಕೌಲ್ ಅವರ ಮನೆಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.
ಉತ್ತರ ಪ್ರದೇಶದಲ್ಲಿ ಸರಿಯಾದ ರೀತಿಯಲ್ಲಿ ಪಕ್ಷ ಸಂಘಟನೆ ಆಗುತ್ತಿಲ್ಲ ಮತ್ತು ಕಾರ್ಯಕರ್ತರಿಗೆ ಸೂಕ್ತ ತರಬೇತಿ ಸಿಗುತ್ತಿಲ್ಲ ಎಂದು ಉತ್ತರ ಪ್ರದೇಶದ ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಪ್ರಿಯಾಂಕ ಉತ್ತರ ಪ್ರದೇಶದಲ್ಲಿ ಮನೆ ಮಾಡಲಿದ್ದಾರೆ.