ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಧ್ರ ಅವರು ಲೋಕಸಮರದಲ್ಲಿ ವಾರಣಾಸಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿಲ್ಲ.
ಅಯೋಧ್ಯೆಯಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ನನಗೆ ಟಿಕೆಟ್ ನೀಡಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ನನ್ನ ಸಹೋದರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನನಗೆ ವಾರಣಾಸಿಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ ನನಗೆ ಖುಷಿಯಾಗುತ್ತೆ ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದರು. ಹೀಗಾಗಿ ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಎಲ್ಲ ಸುದ್ದಿಗಳಿಗೆ ತೆರೆ ಬಿದ್ದಿದ್ದು, ಕಳೆದ ಬಾರಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಅಜಯ್ ರಾಯ್ ಅವರಿಗೆ ಪಕ್ಷ ಈ ಬಾರಿಯೂ ಟಿಕೆಟ್ ನೀಡಿದೆ.
ಕಳೆದ ವಾರ ರಾಹುಲ್ ಗಾಂಧಿಗೆ ನಿಮ್ಮ ಸಹೋದರಿಯನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಸುವ ಯೋಚನೆ ಇದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಾಗ, ಈ ಬಗ್ಗೆ ನಾನು ಏನು ಹೇಳುವುದಿಲ್ಲ. ಈ ವಿಷಯವನ್ನು ನಾನು ಸಸ್ಪೆನ್ಸ್ ಆಗಿ ಇಡುತ್ತೇನೆ. ಪ್ರತಿ ಬಾರಿಯೂ ಸಸ್ಪೆನ್ಸ್ ಕೆಟ್ಟದಾಗಿರಲ್ಲ ಎಂದಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ 371,784 ಮತಗಳ ಅಂತರದಿಂದ ಗೆದ್ದಿದ್ದರು. ಮೋದಿ 5,81,022 ಮತಗಳನ್ನು ಪಡೆದರೆ ಆಪ್ ಮುಖ್ಯಸ್ಥ ಕೇಜ್ರಿವಾಲ್ 2,09,238, ಅಜಯ್ ರಾಯ್ 75,614 ಮತಗಳನ್ನು ಪಡೆದಿದ್ದರು. ಒಟ್ಟು 10,30,685 ಮಂದಿ ಮತವನ್ನು ಚಲಾವಣೆ ಮಾಡಿದ್ದರು.