ಮುಂಬೈ: ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ಶೋಟಿಂಗ್ ಮುಗಿಸಿ ಶೀಘ್ರದಲ್ಲೇ ಭಾರತಕ್ಕೆ ಹಿಂದಿರುಗುತ್ತಿದ್ದು, ಕಲ್ಪನಾ ಚಾವ್ಲಾ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ.
ನ್ಯೂಯಾರ್ಕ್ ನಲ್ಲಿ `ಕ್ವಾಂಟಿಕೊ’ದ ಮೂರನೇ ಸೀಸನ್‍ನ ಕೊನೆಯ ಭಾಗದ ಶೋಟಿಂಗ್‍ನಲ್ಲಿ ಪ್ರಿಯಾಂಕ ಚೋಪ್ರಾ ನಿರತರಾಗಿದ್ದು, ಶೀಘ್ರದಲ್ಲೇ ಭಾರತಕ್ಕೆ ಹಿಂದಿರುಗುತ್ತಿದ್ದಾರೆ ಎಂದು ಹೇಳಲಾಗಿದೆ. ಚೋಪ್ರಾ ಭಾರತಕ್ಕೆ ಬಂದ ನಂತರ ಕಲ್ಪನಾ ಚಾವ್ಲಾ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.
ರಾಷ್ಟ್ರಪ್ರಶಸ್ತಿ ವಿಜೇತೆಯಾಗಿರೋ 35 ವರ್ಷ ವಯಸ್ಸಿನ ಚೋಪ್ರಾ, ತಮ್ಮ ಮುಂದಿನ ಬಾಲಿವುಡ್‍ನ ಚಿತ್ರ ಶೀಘ್ರದಲ್ಲೇ ಆರಂಭವಾಗಲಿದೆ. ಶೀಘ್ರದಲ್ಲೇ ಭಾರತಕ್ಕೆ ಬರುವುದಾಗಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ಮಾಧ್ಯಮಗಳ ವರದಿಗಳ ಪ್ರಕಾರ, ಪ್ರಿಯಾಂಕಾ ಅವರು ಬಾಲಿವುಡ್ ನಲ್ಲಿ ತಮ್ಮ ಮುಂದಿನ ಚಿತ್ರಕ್ಕಾಗಿ ಈಗಾಗಲೇ ಹಲವು ಸ್ಕ್ರಿಪ್ಟ್ ಗಳನ್ನು ಪರಿಗಣಿಸಿದ್ದಾರೆ ಎನ್ನಲಾಗಿದೆ. ಕಲ್ಪನಾ ಚಾವ್ಲಾ ಜೀವನಾಧಾರಿತ ಚಿತ್ರಕ್ಕೆ ಅವರು ಸಹಿ ಹಾಕಿದ್ದು ಚಿತ್ರೀಕರಣ ಮುಂದಿನ ತಿಂಗಳಲ್ಲಿ ಆರಂಭವಾಗಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದ್ರೆ ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
2016 ರಲ್ಲಿ ಪ್ರಿಯಾಂಕಾ ಕೊನೆಯ ಬಾರಿಗೆ ಬಾಲಿವುಡ್‍ನಲ್ಲಿ ಪ್ರಕಾಶ್ ಝಾ ಅವರ ‘ಜೈ ಗಂಗಾಜಲ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅದು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಮುಂದೆ ಆಮಿರ್ ಖಾನ್ ಅವರೊಂದಿಗೆ ‘ಸಲ್ಯೂಟ್’ ಚಿತ್ರದಲ್ಲಿ ಪ್ರಿಯಾಂಕಾ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಚಿತ್ರದಿಂದ ಆಮಿರ್ ಹೊರಬಂದಿದ್ದು, ಶಾರುಖ್ ಖಾನ್ ಈ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ನಾಯಕಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.
ಈ ಮಧ್ಯೆ ಪ್ರಿಯಾಂಕಾ ಮುಂದಿನ ವಾರ ಮುಂಬೈಗೆ ಆಗಮಿಸುವ ನಿರೀಕ್ಷೆ ಇದೆ.