ಪಾಕ್‍ಗೆ ಮತ್ತೆ ಮುಖಭಂಗ – ಪ್ರಿಯಾಂಕ ಬೆನ್ನಿಗೆ ನಿಂತ ಯುನಿಸೆಫ್

Public TV
2 Min Read
Priyanka Chopra

ನವದೆಹಲಿ: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿಯ(ಯುನಿಸೆಫ್) ಸೌಹಾರ್ದಯುತ ರಾಯಭಾರಿಯಾಗಿರುವ ಪ್ರಿಯಾಂಕ ಚೋಪ್ರಾ ವಿರುದ್ಧ ಪಾಕಿಸ್ತಾನ ನೀಡಿದ್ದ ದೂರನ್ನು ಯುನಿಸೆಫ್ ತಳ್ಳಿ ಹಾಕಿದೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಪಾಕ್‍ಗೆ ಭಾರೀ ಮುಖಭಂಗವಾಗಿದೆ.

ಪ್ರಿಯಾಂಕ ಚೋಪ್ರಾ ಅವರು ಕಾಶ್ಮೀರದ ಬಗ್ಗೆ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರದ ಕುರಿತು ತಮ್ಮ ನಿಲುವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಹಾಗಾಗಿ ಪ್ರಿಯಾಂಕರನ್ನು ರಾಯಭಾರಿ ಸ್ಥಾನದಿಂದ ತೆಗೆಯುವಂತೆ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು.

UNICEF

ಗುರುವಾರ ಈ ವಿಚಾರವಾಗಿ ಮಾತನಾಡಿರುವ, ಯುನಿಸೆಫ್‍ನ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಮಾಧ್ಯಮ ವಕ್ತಾರ ಸ್ಟೀಫನ್ ಡುಜಾರಿಕ್ ಅವರು, ಯುನಿಸೆಫ್ ಗುಡ್‍ವಿಲ್ ರಾಯಭಾರಿಗಳು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಾತನಾಡುವಾಗ ರಾಯಭಾರಿಗಳು ಅವರ ಆಸಕ್ತಿ ಅಥವಾ ಕಾಳಜಿಯ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳ ಬಗ್ಗೆ ನಾವು ಆಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ರಾಯಭಾರಿಗಳ ವೈಯಕ್ತಿಕ ವಿಚಾರಗಳು ಮತ್ತು ಅಭಿಪ್ರಾಯಗಳ ಮಧ್ಯೆ ಯೂನಿಸೆಫ್ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಅವರು ಯೂನಿಸೆಫ್ ಪರವಾಗಿ ಮಾತನಾಡುವಾಗ ಯುನಿಸೆಫ್‍ನ ಸಾಕ್ಷಿ ಆಧಾರಿತ ಮತ್ತು ನಿಷ್ಪಕ್ಷಪಾತವಾದ ನಿಲುವುಗಳಿಗೆ ಅವರು ಬದ್ಧರಾಗಿರಬೇಕು. ಯುನಿಸೆಫ್ ರಾಯಭಾರಿಗಳು ಮಕ್ಕಳ ಹಕ್ಕನ್ನು ಉತ್ತೇಜಿಸುವ ನಿಟ್ಟಿನಲ್ಲಿ ತಮ್ಮ ಸಮಯ ಮತ್ತು ಸಾರ್ವಜನಿಕ ಬದುಕಿನಲ್ಲಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಆರೋಪವೇನು?
ಪ್ರಿಯಾಂಕ ಚೋಪ್ರಾ ಅವರು ಕಾಶ್ಮೀರದ ಬಗ್ಗೆ ಭಾರತ ಸರ್ಕಾರ ಕೈಗೊಂಡಿರುವ ನಿರ್ಧಾರದ ಕುರಿತು ತಮ್ಮ ನಿಲುವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಭಾರತೀಯ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ನ್ಯೂಕ್ಲಿಯರ್ ಬೆದರಿಕೆಯನ್ನು ಬೆಂಬಲಿಸಿದ್ದಾರೆ. ಈ ಎಲ್ಲ ವಿಚಾರಗಳು ಶಾಂತಿ ಹಾಗೂ ಸದ್ಭಾವನೆಗೆ ವಿರುದ್ಧವಾಗಿವೆ. ಅಲ್ಲದೆ ವಿಶ್ವಸಂಸ್ಥೆಯ ನಿಯಮಗಳಿಗೂ ವಿರುದ್ಧವಾಗಿವೆ. ಹೀಗಾಗಿ ಪ್ರಿಯಾಂಕ ಚೋಪ್ರಾ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಪಾಕ್ ಸಚಿವ ಶಿರೀನ್ ಮಝಾರಿ ವಿಶ್ವಸಂಸ್ಥೆಗೆ ಪತ್ರ ಬರೆದು ಒತ್ತಾಯ ಮಾಡಿದ್ದರು.

ಫೆ.26ರಂದು ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ನಂತರ ಅದೇ ದಿನ ಪ್ರಿಯಾಂಕ ಚೋಪ್ರಾ ಜೈ ಹಿಂದ್ #IndianArmedForces  ಬಳಸಿ ಭಾರತದ ಧ್ವಜ ಮತ್ತು ಕೈ ಮುಗಿಯುತ್ತಿರುವ ಎಮೋಜಿ ಹಾಕಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಆಕ್ಷೇಪಿಸಿ ಪಾಕಿಸ್ತಾನ ಯುನಿಸೆಫ್ ಮುಂದೆ ದೂರು ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *