– ಜಾಧವ್ ಕಟ್ಟಿಹಾಕಲು ಖರ್ಗೆ ಮಾಸ್ಟರ್ ಪ್ಲಾನ್
ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವಿನ ಮಾತಿನ ಸಮರ ಮುಂದುವರಿದಿದ್ದು, ಚಿಂಚೋಳಿ ಉಪಚುಣಾವಣೆಯಲ್ಲಿ ಜಾಧವ್ ಪುತ್ರ ಡಾ. ಅವಿನಾಶ್ ಜಾಧವ್ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಟ್ವೀಟ್ ಮಾಡಿ ಪ್ರಿಯಾಂಕ್ ಖರ್ಗೆ ಬಿಜೆಪಿ ಕಾಲೆಳೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ನೀಡದಿರುವ ಕುರಿತು ಬಿಜೆಪಿ ರಾಷ್ಟ್ರಿಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿರುವ ಪ್ರಿಯಾಂಕ್ ಖರ್ಗೆ, ಕಲಬುರಗಿಯಲ್ಲಿ ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‍ಗೆ ಡಿಎನ್‍ಎ ಲೆಕ್ಕಕ್ಕೆ ಬರುತ್ತದೆ. ಆದರೆ ಕಲಬುರಗಿ ದಕ್ಷಿಣ ಶಾಸಕ, ಗುತ್ತೇದಾರ್, ಚಿಂಚನಸೂರ್, ಸೇಡಂ ಶಾಸಕರ ಕುಟುಂಬ ರಾಜಕೀಯದಲ್ಲಿ ಸಕ್ರೀಯರಾಗಿದ್ದು, ಇದೀಗ ಚಿಂಚೋಳಿಯಲ್ಲಿ ಕುಟುಂಬ ರಾಜಕೀಯ ನಡೆದಿದೆ. ಮಡಕೆ ಕಪ್ಪಗಿದ್ರೂ ಬೇರೆಯವರಿಗೆ ಕಪ್ಪು ಅನ್ನುತ್ತೆ ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕೀಯದ ಬಗ್ಗೆ ಮಾತಾಡುವವರಿಗೆ ಟಾಂಗ್ ನೀಡಿದ್ದಾರೆ.
ಖರ್ಗೆ ಮಾಸ್ಟರ್ ಪ್ಲಾನ್: ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಪುತ್ರನಿಗೆ ಟಿಕೆಟ್ ಖಚಿತವಾಗುತ್ತಿದೆ ಅವರನ್ನು ಕಟ್ಟಿಹಾಕಲು ಪ್ರಿಯಾಂಕ್ ಖರ್ಗೆ ಅವರು ಮಾಸ್ಟರ್ ಪ್ಲಾನ್ ಮಾಡಿದ್ದು, ಕಾಂಗ್ರೆಸ್ ನಿಂದ ಸುಭಾಷ್ ರಾಠೋಡ್ ಅವರಗೆ ಟಿಕೆಟ್ ಲಭಿಸುವಂತೆ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಕೂಡಾ ಲಂಬಾಣಿ ಸಮಾಜಕ್ಕೆ ಸೇರಿದವರಾಗಿದ್ದು, ಸದ್ಯ ಕಾಂಗ್ರೆಸ್ ಕೂಡ ಲಂಬಾನಿ ಅಭ್ಯರ್ಥಿಯನ್ನೇ ಆಯ್ಕೆ ಮಾಡುವ ಮೂಲಕ ಮತ ನಿರ್ಣಾಯಕ ಲಂಬಾಣಿ ಮತಗಳ ವಿಭಜನೆಗೆ ಪ್ಲಾನ್ ಮಾಡಿದ್ದಾರೆ.
ಕ್ಷೇತ್ರದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಲಂಬಾಣಿ ಮತಗಳು ಇದ್ದು, ಆ ಮೂಲಕ ಲಂಬಾಣಿ ಮತಗಳನ್ನು ವಿಭಜಸಿ ಜಾಧವ್ ಕಟ್ಟಿಹಾಕಲು ರಣತಂತ್ರ ರೂಪಿಸಲಾಗಿದೆ. ಜಾಧವ್ ಸ್ವಕ್ಷೇತ್ರದಲ್ಲಿಯೇ ಸೋಲಿಸುವ ಮೂಲಕ ಟಾಂಗ್ ನೀಡಲು ಸಿದ್ಧತೆ ನಡೆದಿದೆ. ಈ ಹಿಂದೆ ಚಿಂಚೋಳಿ ಕ್ಷೇತ್ರದಲ್ಲಿ ಸ್ವತಃ ಸಚಿವ ಪ್ರಿಯಾಂಕ್ ಅವರೇ ತಮ್ಮ ಪುತ್ರನ ವಿರುದ್ಧ ಸ್ಪರ್ಧೆ ನಡೆಸಲಿ ಎಂದು ಉಮೇಶ್ ಜಾಧವ್ ಸವಾಲು ಎಸೆದಿದ್ದರು. ಪರಿಣಾಮ ಖರ್ಗೆ ಹಾಗೂ ಜಾಧವ್ ಕುಟುಂಬಗಳಿಗೆ ಚಿಂಚೋಳಿ ಕ್ಷೇತ್ರ ಪ್ರತಿಷ್ಠೆಯ ಕದನವಾಗಿ ಏರ್ಪಟ್ಟಿದೆ.