ಬೆಂಗಳೂರು: ಪೆಟ್ರೋಲ್ ಡೀಸೆಲ್ ದರ ಹೆಚ್ಚಳ (Petrol price hike) ಮಾಡಲಾಗಿದೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾದರೆ ಅವರ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ದರ ಎಷ್ಟಿದೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿಗರಿಗೆ (BJP) ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡಲಿ. ಅವರಿಗೆ ಪ್ರತಿಭಟಿಸುವ ಹಕ್ಕಿದೆ. ಜನರ ಸವಾಲುಗಳಿಗೆ ಉತ್ತರ ಕೊಡುವವರು ಯಾರು? ಪೆಟ್ರೋಲ್ ದರವನ್ನು 97ರೂ. ವರೆಗೆ ತಂದವರು ಯಾರು? ಸೆಸ್‍ಗಳ ಅನುಕೂಲ ಮಾಡಿಕೊಟ್ಟಿದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ಅದನ್ನು ಜನ ಸಾಮಾನ್ಯರಿಗೆ ಕೊಟ್ಟಿದ್ದೀರಾ? ನಾವು ಕೇವಲ 3ರೂ. ಏರಿಕೆ ಮಾಡಿದ್ದೇವೆ ಅಷ್ಟೇ ಎಂದು ಅವರು ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರ, ಆಂದ್ರದಲ್ಲಿ ಎಷ್ಟಿದೆ? ಬಿಜೆಪಿ ಇರುವ ರಾಜ್ಯಗಳಲ್ಲಿ ತೈಲ ಬೆಲೆ ಎಷ್ಟಾಗಿದೆ? ಇವರು ಬೆಲೆ ಏರಿಕೆ ಮಾಡಿದಾಗ ದೇಶ ಕಟ್ಟುವ ಅವಶ್ಯಕತೆ ಇದೆ ಅಂತಾರೆ. ನಾವು ಮಾಡಿದ್ರೆ ದೇಶ ಹಾಳಾಗುತ್ತಾ? ಅಂಕಿ ಅಂಶಗಳನ್ನು ನಾಳೆ (ಜೂ.18) ಜನರ ಮುಂದೆ ಇಡುತ್ತೇವೆ. ಆಗ ಎಲ್ಲಾ ವಿಚಾರ ತಿಳಿಯಲಿದೆ ಎಂದು ಅವರು ಕಿಡಿಕಾರಿದ್ದಾರೆ.
ಗ್ಯಾರೆಂಟಿ ಹಣ ಬಳಕೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಆ ದುಡ್ಡನ್ನು ಸಿಎಂ, ಡಿಸಿಎಂ ಮನೆಗೆ ತೆಗೆದುಕೊಂಡು ಹೋಗ್ತಾರಾ? ಹಾಗೆ ಮಾಡೋಕೆ ಆಗುತ್ತಾ? ಅಡುಗೆ ಮನೆ ನಡೆಸಲು ಕಷ್ಟ ಆಗುತ್ತದೆ ಎಂದು ನಾವು ಗ್ಯಾರೆಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
2023-24ರಲ್ಲಿ ಎಲ್ಲಾ ತೈಲ ಕಂಪನಿಗಳ ಆದಾಯ 82 ಕೋಟಿ ರೂ. ಇದೆ. ಅದರ ಹಣವನ್ನ ಕೇಂದ್ರದಿಂದ ಜನರಿಗೆ ಕೊಟ್ಟಿದ್ದಾರಾ? ಕಡಿಮೆ ಬೆಲೆಗೆ ಖರೀದಿ ಮಾಡಿ, ರಷ್ಯಾದಿಂದ 3.2 ಬಿಲಿಯನ್ ಲಾಭ ಮಾಡಿದ್ದೀರಿ. ಅದನ್ನು ಸಾಮಾನ್ಯರಿಗೆ ಕೊಟ್ಟಿದ್ದೀರಾ? ಬಿಜೆಪಿ ಆಡಳಿತ ಇರುವ ರಾಜ್ಯದಲ್ಲಿ 110ರೂ. ಗಡಿ ದಾಟಿದೆ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಈಗ ಬಹಳ ವರ್ಷ ಆದ್ಮೇಲೆ ನಾವು ಬೆಲೆ ಏರಿಕೆ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.