ರಾಮನಗರ: ಆರ್‌ಟಿಇ ಕಾಯ್ದೆಯಡಿ ನಾಲ್ಕು ವರ್ಷಗಳ ಕಾಲ ಶಾಲೆಯಲ್ಲಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿಯೋರ್ವಳನ್ನು ಡೊನೇಷನ್ ಕಟ್ಟಲಿಲ್ಲವೆಂದು ಶಾಲೆಯಿಂದ ಹೊರಹಾಕಿದ ಅಮಾನವೀಯ ಘಟನೆ ರಾಮನಗರದಲ್ಲಿ ನಡೆದಿದೆ.
ನಗರದ ಖಾಸಗಿ ಶಾಲೆ ಶರತ್ ಮೆಮೋರಿಯಲ್ ಆಂಗ್ಲ ಶಾಲೆಯಲ್ಲಿ ಐದನೇ ತರಗತಿ ವ್ಯಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಲಾವಣ್ಯಳನ್ನು ಶಾಲೆಯಿಂದ ಹೊರಹಾಕಲಾಗಿದೆ. ಅಂದಹಾಗೇ ಹುಟ್ಟಿದಾಗಲೇ ಹೆತ್ತವರಿಂದ ದೂರವಾಗಿರುವ ಬಾಲಕಿಯನ್ನು ನಗರದ ಚಂದ್ರಮ್ಮ ಎಂಬುವವರು ಸಾಕಿ ಬೆಳೆಸುತ್ತಿದ್ದಾರೆ. ಮಗಳಿಗೆ ಯಾವುದೇ ಕೊರತೆಯಾಗದಂತೆ ಆರ್‌ಟಿಇ ಅಡಿಯಲ್ಲಿ ಶರತ್ ಮೆಮೋರಿಯಲ್ ಶಾಲೆಗೆ ಚಂದ್ರಮ್ಮ ದಾಖಲಿಸಿದ್ದಾರೆ. ಆದರೆ ಉಚಿತ ಶಿಕ್ಷಣದ ಸೀಟು ಪಡೆದಿದ್ದರೂ ಶಾಲಾ ಮಂಡಳಿ ವಿದ್ಯಾರ್ಥಿನಿ ಬಳಿ ಡೊನೇಷನ್ ಕೇಳಿದೆ.
Advertisement
Advertisement
ನಾಲ್ಕು ವರ್ಷಗಳ ಕಾಲ ವಿದ್ಯಾಭ್ಯಾಸ ನೀಡಿರುವ ಶಾಲಾ ಆಡಳಿತ ಮಂಡಳಿ ಇದೀಗ 25,500 ರೂಪಾಯಿ ಶಾಲಾ ಶುಲ್ಕ ಕಟ್ಟಿ, ಪರೀಕ್ಷಾ ಶುಲ್ಕ ಹಾಗೂ ಸಮವಸ್ತ್ರದ ಶುಲ್ಕ ಕಟ್ಟಿ ಎನ್ನುತ್ತಿದೆ. ಹಣ ಕಟ್ಟಲು ಸಾಮರ್ಥ್ಯವಿಲ್ಲದ ಚಂದ್ರಮ್ಮ ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಣ ಕಟ್ಟಿ ಆಮೇಲೆ ನಿಮ್ಮ ಲಾವಣ್ಯಳನ್ನು ಶಾಲೆಗೆ ಕಳುಹಿಸಿ ಎಂದು ಶಾಲಾ ಸಿಬ್ಬಂದಿ ಹೇಳಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ 5 ಸಾವಿರ ಕಟ್ಟಿ ಟಿಸಿ ತೆಗೆದುಕೊಂಡು ಹೋಗಿ ಎಂದು ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿನಿಯ ಕೈ ಬಿಟ್ಟಿದೆ. ವಿದ್ಯಾರ್ಥಿನಿಯ ಭವಿಷ್ಯ ರೂಪಿಸುವ ಶಾಲೆ ಈಗ ಆಕೆಯ ಭವಿಷ್ಯಕ್ಕೆ ಮುಳುವಾಗಿ ನಿಂತಿದೆ. ದೇವರು ವರ ಕೊಟ್ಟರು ಪೂಜಾರಿ ಕೊಡಲ್ಲ ಎನ್ನುವಂತೆ, ಸರ್ಕಾರ ಆರ್‌ಟಿಇ ಅಡಿ ಉಚಿತ ಸೀಟು ನೀಡಿದ್ದರೂ ಖಾಸಗಿ ಶಾಲೆ ಮಾತ್ರ ಇದಕ್ಕೆ ಒಪ್ಪದೇ ಹಣದ ಹಿಂದೆ ಬಿದ್ದಿದೆ.
ಈ ರೀತಿ ಜಿಲ್ಲೆಯಲ್ಲಿ ಆರ್‌ಟಿಇ ಮಕ್ಕಳಿಂದಲೂ ಹಣ ವಸೂಲಿ ಮಾಡುತ್ತಿದ್ದರೂ ಅಧಿಕಾರಿಗಳು ಯಾವುದಕ್ಕೂ ಕೂಡಾ ಕ್ಯಾರೇ ಎನ್ನದೆ ಕಣ್ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಸಮಸ್ಯೆಯನ್ನು ಬಗೆಹರಿಸಬೇಕಿದೆ.