ಬೆಂಗಳೂರು: ಉದ್ಯಮಿಯೊಬ್ಬರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಖಾಸಗಿ ವಾಹಿನಿಯ ಸಿಇಒ ಲಕ್ಷ್ಮಿ ಪ್ರಸಾದ್ ವಾಜಪೇಯಿ ಎಂಬವರನ್ನು ಕೋರಮಂಗಲ ಪೊಲೀಸರು ಇಂದು ಬಂಧಿಸಿದ್ದಾರೆ. ಲಕ್ಷ್ಮಿ ಪ್ರಸಾದ್ ವಾಜಪೇಯಿಗೆ ಸಹಕಾರ ನೀಡಿದ ಮಿಥುನ್ ಎಂಬಾತನನ್ನೂ ಕೂಡ ಕಮರ್ಷಿಯಲ್ ಸ್ಟ್ರೀಟ್, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?: ಖಾಸಗಿ ವಾಹಿನಿಯಿಂದ ಬೆದರಿಕೆ ಇರುವ ಬಗ್ಗೆ ಉದ್ಯಮಿಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ ಚಾನೆಲ್ ಸಿಇಒ ಲಕ್ಷ್ಮಿ ಪ್ರಸಾದ್ ವಾಜಪೇಯಿ 10 ಕೋಟಿ ರೂ. ಹಣಕ್ಕೆ ಬೇಡಿ ಇಟ್ಟಿದ್ದಾರೆ. ಹಣವನ್ನು ನೀಡದಿದ್ದರೆ ಚಾನೆಲ್‍ನಲ್ಲಿ ವರದಿ ಪ್ರಕಟ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ, ಕೆಲ ನಿಮಿಷಗಳ ಕಾಲ ಸುದ್ದಿ ಪ್ರಸಾರ ಮಾಡಿದ್ದರು. ಇದಾದ ಬಳಿಕ ಚಾನೆಲ್‍ನಿಂದ ಹಣಕ್ಕೆ ಡಿಮ್ಯಾಂಡ್ ಬಂದಿತ್ತು. ದೂರು ಸ್ವೀಕರಿಸಿದ ಪೊಲೀಸರು ವಾಹಿನಿ ಕಚೇರಿಯಲ್ಲೇ ಹಣ ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ಲಕ್ಷ್ಮಿಪ್ರಸಾದ್ ಹಾಗೂ ಮಿಥುನ್ ಎಂಬವರನ್ನು ಬಂಧಿಸಿದ್ದಾರೆ.
Advertisement
ಸಿಇಓ ವಿರುದ್ಧ ಮತ್ತಷ್ಟು ಪ್ರಕರಣ: ಇದೇ ಸಿಇಒ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಉದ್ಯಮಿಯೊಬ್ಬರಿಂದ ಲಕ್ಷ್ಮಿಪ್ರಸಾದ್ ಅವರು 10 ಕೋಟಿ ನಗದು ಹಾಗೂ 30 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ವಾಜಪೇಯಿ ಅವರು ನೀಡಿದ ವಿವಿಧ ಖಾತೆಗಳಿಗೆ ಒಟ್ಟಾರೆ 10 ಕೋಟಿ ರೂಪಾಯಿಯನ್ನು ಜಮೆ ಮಾಡಿದ್ದರು. ಒಟ್ಟಾರೆಯಾಗಿ ಈ ಉದ್ಯಮಿಗೆ 15 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ದೂರು ದಾಖಲಾಗಿತ್ತು. ಮಹಾಲಕ್ಷ್ಮಿಪುರಂ ಠಾಣೆಯಲ್ಲಿ ಇಂಥದ್ದೇ ಮತ್ತೊಂದು ದೂರು ದಾಖಲಾಗಿದ್ದು ಈ ಪ್ರಕರಣದಲ್ಲೂ ಲಕ್ಷ್ಮಿಪ್ರಸಾದ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.
Advertisement
ಬ್ಲ್ಯಾಕ್‍ಮೇಲ್ ಹೇಗೆ?: ಉದ್ಯಮಿಗಳನ್ನು ಕೇಂದ್ರವಾಗಿಟ್ಟುಕೊಂಡೇ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಉದ್ಯಮಿಯ ಬಗ್ಗೆ ನೆಗೆಟಿವ್ ಸುದ್ದಿಗಳನ್ನು ಚಾನೆಲ್‍ನಲ್ಲಿ ಪ್ರಸಾರ ಮಾಡುತ್ತಿದ್ದರು. ಇದಾದ ಬಳಿಕ ಅದೇ ಉದ್ಯಮಿಗೆ ಕಾಲ್ ಮಾಡಿ ನಿಮ್ಮ ವಿರುದ್ಧ ನಮ್ಮ ಬಳಿ ಇನ್ನಷ್ಟು ಸಾಕ್ಷ್ಯಗಳಿವೆ. ನೀವು ನಮಗೆ ಹಣ ಕೊಡಿ ಇಲ್ಲದಿದ್ದರೆ ನಿಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಸದ್ಯ ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಬಂಧಿತರ ತನಿಖೆ ಮುಂದುವರೆದಿದೆ.
Advertisement
ಇದೇ ಸಿಇಒ ಬಳಿ ಉತ್ತರಪ್ರದೇಶ ಮೂಲದ ನಾಲ್ವರು ಗನ್ ಮ್ಯಾನ್‍ಗಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಗನ್ ಮ್ಯಾನ್ ಸೆಕ್ಯೂರಿಟಿ ಪಡೆಯುವ ಲೈಸೆನ್ಸ್ ಇದೆಯಾ ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಚಾನೆಲ್ ಮೂಲಕ ಬಂದಿರುವ ಸಿಇಒ ಲಕ್ಷ್ಮಿಪ್ರಸಾದ್ ಅಲ್ಲೂ ಇದೇ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.