ರಾಯಚೂರು: ಬೆಂಗಳೂರಿನಿಂದ (Bengaluru) ರಾಯಚೂರಿಗೆ ಬರುತ್ತಿದ್ದ ಖಾಸಗಿ ಎಸಿ ಸ್ಲೀಪರ್ ಬಸ್‌ಗೆ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಟ್ರಾವೆಲ್ ಏಜೆನ್ಸಿ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಖಾಸಗಿ ಟ್ರಾವೆಲ್ ಏಜೆನ್ಸಿ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಕಂಡಿಷನ್‌ನಲ್ಲಿಲ್ಲದ ಬಸ್ ಬಿಟ್ಟಿದ್ದಲ್ಲದೇ, ಚಾಲಕನ ನಿರ್ಲಕ್ಷ್ಯದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಅದಲ್ಲದೇ ಶಾಲಾ-ಕಾಲೇಜು ದಾಖಲೆಗಳು, ಚಿನ್ನಾಭರಣ, ಮೊಬೈಲ್, ಲ್ಯಾಪ್‌ಟಾಪ್, ನಗದು ಬೆಂಕಿಗಾಹುತಿಯಾಗಿವೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಂದ ಹೊರಟಿದ್ದ ಖಾಸಗಿ ಬಸ್ ಏಕಾಏಕಿ ಬೆಂಕಿಗಾಹುತಿ – 36 ಮಂದಿ ಪ್ರಯಾಣಿಕರು ಸೇಫ್
ಸದ್ಯ ಬಸ್ ಚಾಲಕನನ್ನ ಅನಂತಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಕಿ ಹೊತ್ತಿಕೊಂಡಿದ್ದು ಹೇಗೆ?
ಗ್ರೀನ್ ಲೈನ್ ಟ್ರಾವೆಲ್ಸ್‌ಗೆ ಸೇರಿದ ಈ ಬಸ್ ಬೆಂಗಳೂರು-ಅನಂತಪುರ ಹೈವೇನಲ್ಲಿ ಹೊರಟಿತ್ತು. ಈ ವೇಳೆ ಟಯರ್ ಬ್ಲಾಸ್ಟ್ ಆಗಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಬ್ಲಾಸ್ಟ್ ಆಗುತ್ತಿದ್ದಂತೆ ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನೂ ಬಿಟ್ಟು ಬಸ್‌ನಿಂದ ಜಿಗಿದಿದ್ದಾರೆ. ಹೀಗಾಗಿ ಪ್ರಯಾಣಿಕರ ಸಂಪೂರ್ಣ ಲಗೇಜ್‌ಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯಾರ್ಥಿಗಳ ಪ್ರಮಾಣ ಪತ್ರ, ದುಬಾರಿ ವಸ್ತುಗಳು ಸುಟ್ಟು ಭಸ್ಮವಾಗಿದೆ.
ಬಸ್‌ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಚಾಲಕ ನಿರ್ಲಕ್ಷ್ಯ ವಹಿಸಿದ್ದಾನೆ. ಇದೇ ವೇಳೆ ನಿದ್ರೆ ಮಂಪರಿನಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರಿಗೆ ಎಚ್ಚರವಾಗಿದೆ. ಕೂಡಲೇ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ಕಿರುಚಿದ್ದಾರೆ. ಆದಾಗ್ಯೂ ಡ್ರೈವರ್ ಅರ್ಧ ಕಿಮೀ ಬಸ್ ನಿಲ್ಲಿಸದೇ ಹೊರಟಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿದೆ. ಸದ್ಯ ಪ್ರಯಾಣಿಕರು ಸೇಫ್ ಆಗಿದ್ದರೂ, ಅವರ ಬಳಿಯಿದ್ದ ಮಹತ್ವದ ದಾಖಲೆಗಳು, ಹಬ್ಬಕ್ಕೆ ಕೊಂಡೊಯ್ಯುತ್ತಿದ್ದ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿದೆ. ಹೀಗಾಗಿ ಪ್ರಯಾಣಿಕರು ಗ್ರೀನ್‌ಲೈನ್ ಟ್ರಾವೆಲ್ಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ – ತೀರ್ಥರೂಪಿಣಿಯಾಗುವ ವಿಸ್ಮಯ ಕಾಣಲು ಜನ ಕಾತರ