ರಾಮನಗರ: ಚಾಲಕನೊಬ್ಬ ಮದ್ಯಪಾನ ಮಾಡಿ ಖಾಸಗಿ ಬಸ್ ಚಲಾಯಿಸಿ ಪಲ್ಟಿ ಹೊಡೆಸಿದ ಘಟನೆ ಕನಕಪುರ ತಾಲೂಕಿನ ಅಂಗರಹಳ್ಳಿ ಗ್ರಾಮದ ಬಳಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಅಂಗರಹಳ್ಳಿ ಗ್ರಾಮದ ಜನರು ಬಸ್ಸಿನಲ್ಲಿ ಬೀಗರ ಔತಣ ಕೂಟಕ್ಕೆ ಕನಕಪುರದ ದೊಡ್ಡಮುದವಾಡಿ ಸಮೀಪದ ಅಂಗರಹಳ್ಳಿಗೆ ಹೋಗಿದ್ದರು. ಊಟ ಮುಗಿಸಿ ವಾಪಸ್ಸಾಗುತಿದ್ದ ಬಸ್ಸನ್ನು ಮದ್ಯಪಾನ ಮಾಡಿ ಚಾಲಕ ಬಸ್ ಚಲಾಯಿಸಿದ್ದಾನೆ. ಈ ಖಾಸಗಿ ಬಸ್ಸಿನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಈ ವೇಳೆ ಅಂಗರಹಳ್ಳಿ ಗ್ರಾಮದ ಬಳಿ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ಈ ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ 10 ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.