ಲಂಡನ್: ಭಾರತೀಯ ಮೂಲದ ಪ್ರೀತಿ ಪಟೇಲ್ ಅವರು ಲಂಡನ್‍ನಲ್ಲಿ ಗೃಹ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಇಂಗ್ಲೆಂಡ್ ನಲ್ಲಿ ಗೃಹ ಕಾರ್ಯದರ್ಶಿಯಾದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ನಲ್ಲಿ ಹೊಸದಾಗಿ ಅನಾವರಣಗೊಂಡ ಬೋರಿಸ್ ಜಾನ್ಸನ್ ಅವರ ಸಚಿವ ಸಂಪುಟದಲ್ಲಿ ಥೆರೆಸಾ ಮೇ ಅವರ ಬ್ರೆಕ್ಸಿಟ್ ಕಾರ್ಯತಂತ್ರದ ಬಗ್ಗೆ ತೀವ್ರವಾಗಿ ಟೀಕಿಸಿದ ಪ್ರೀತಿ ಪಟೇಲ್ ಅವರನ್ನು ಬ್ರಿಟನ್‍ನ ಮೊದಲ ಭಾರತೀಯ ಮೂಲದ ಗೃಹ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
The Rt Hon Priti Patel @patel4witham has been appointed Secretary of State for the Home Department @ukhomeoffice pic.twitter.com/O5PCExDg8O
— UK Prime Minister (@10DowningStreet) July 24, 2019
ಪ್ರೀತಿ ಪಟೇಲ್ ಅವರು ಕನ್ಸರ್ವೇಟಿವ್ ಪಕ್ಷದ ನೇತೃತ್ವದಲ್ಲಿ ಆರಂಭಗೊಂಡ “ಬ್ಯಾಕ್ ಬೋರಿಸ್” ಎಂಬ ಅಭಿಯಾನದ ಪ್ರಮುಖ ಸದಸ್ಯರಾಗಿದ್ದರು. ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿದ್ದ ತಂಡದಲ್ಲಿ ಪ್ಲಮ್ ಹುದ್ದೆಗೆ ಆಯ್ಕೆಯಾಗಿದ್ದರು.
47 ರ ಹರೆಯದ ಪ್ರೀತಿ ಪಟೇಲ್ ಅವರು 2010ರಲ್ಲಿ ಮೊದಲ ಬಾರಿಗೆ ಎಸೆಕ್ಸ್‍ನಲ್ಲಿ ವಿಥಮ್ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿ ಆಯ್ಕೆಯಾದರು. ಆ ಸಮಯದಲ್ಲಿ ಲಂಡನ್‍ನಲ್ಲಿ ಇದ್ದ ಡೇವಿಡ್ ಕ್ಯಾಮರೂನ್ ಟೋರಿ ಸರ್ಕಾರದಲ್ಲಿ ತಮ್ಮ ಭಾರತೀಯ ವಲಸೆಗಾರ ಚಾಂಪಿಯನ್ ಆಗಿ ಪ್ರೀತಿ ಮುನ್ನಡೆಸಿದ್ದರು.
ಇದಕ್ಕೂ ಮುನ್ನ ಹಲವಾರು ಕಿರಿಯ ಹುದ್ದೆಯನ್ನು ನಿರ್ವಹಿಸಿದ್ದ ಪ್ರೀತಿ ಪಟೇಲ್ 2014ರಲ್ಲಿ ಖಜಾನೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 2015ರ ಸಾರ್ವತ್ರಿಕ ಚುನಾವಣೆಯ ಬಳಿಕ ಉದ್ಯೋಗ ಸಚಿವೆಯಾಗಿ ನೇಮಕಗೊಂಡಿದ್ದರು. ಥೆರೆಸಾ ಮೇ ಅವರು 2016ರಲ್ಲಿ ಅಂತರರಾಷ್ಟ್ರೀಯ ಅಭಿವೃದ್ಧಿ ಇಲಾಖೆಯಲ್ಲಿ (ಡಿಎಫ್‍ಐಡಿ) ರಾಜ್ಯ ಕಾರ್ಯದರ್ಶಿಯಾಗಿ ಬಡ್ತಿ ನೀಡಿದರು. ಪ್ರೀತಿ ಪಟೇಲ್ ಅವರು 2017ರಲ್ಲಿ ಈ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಕ್ಯಾಬಿನೆಟ್‍ನಲ್ಲಿ ಅವರನ್ನು ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡುವ ಕೆಲವು ಗಂಟೆಗಳ ಮೊದಲು ಮಾತನಾಡಿದ ಪ್ರೀತಿ ಪಟೇಲ್ ಅವರು “ಈಗ ರಚನೆಯಾಗುವ ಕ್ಯಾಬಿನೆಟ್ ಆಧುನಿಕ ಬ್ರಿಟನ್ ಮತ್ತು ಆಧುನಿಕ ಕನ್ಸರ್ವೇಟಿವ್ ಪಕ್ಷವನ್ನು ಪ್ರತಿನಿಧಿಸುವುದು ಮುಖ್ಯ” ಎಂದು ಹೇಳಿದ್ದರು.
ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸಿ ಪ್ರಧಾನ ಮಂತ್ರಿಯಾಗಿ ಯುನೈಟೆಡ್ ಕಿಂಗ್‍ಡಮ್ ಬ್ರಿಟನ್‍ನಲ್ಲಿ ನಂಬಿಕೆ ಇಟ್ಟ ನಾಯಕರಾಗಿದ್ದಾರೆ. ದೇಶದ ಭವಿಷ್ಯಕ್ಕಾಗಿ ಹೊಸ ದೃಷ್ಟಿ ಮತ್ತು ಸ್ವ-ಆಡಳಿತ ರಾಷ್ಟ್ರವಾಗಿ ಅಭಿವೃದ್ಧಿ ಹೊಂದಲು ಒಂದು ಮಾರ್ಗಸೂಚಿಯನ್ನು ಜಾರಿಗೆ ತರಬೇಕು. ಈ ಮಾರ್ಗಸೂಚಿ ವಿಶ್ವದಾದ್ಯಂತ ಇರುವ ಭಾರತದಂತಹ ಮಿತ್ರರಾಷ್ಟ್ರಗಳೊಂದಿಗೆ ನಮ್ಮ ಸಂಬಂಧವನ್ನು ಪುನಃ ಸ್ಥಾಪಿಸುತ್ತದೆ ಎಂದು ಹೇಳಿದ್ದಾರೆ.
ಗುಜರಾತಿ ಮೂಲದ ರಾಜಕಾರಣಿ ಪ್ರೀತಿ ಪಟೇಲ್ ಯುಕೆ ಯಲ್ಲಿ ನಡೆಯುವ ಎಲ್ಲಾ ಪ್ರಮುಖ ಭಾರತೀಯ ವಲಸೆ ಕಾರ್ಯಕ್ರಮಗಳಲ್ಲಿ ಪ್ರಮುಖ ಅತಿಥಿಯಾಗಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರಾಗಿದ್ದಾರೆ.