– 2022ರ ದಾಳಿಗೆ ಸಂಬಂಧಿಸಿದಂತೆ ನೋಟಿಸ್
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ಎಲ್2: ಎಂಪುರಾನ್ (L2: Empuraan) ವಿವಾದದ ಸುಳಿಯಲ್ಲಿ ಸಿಲುಕಿದ ಬೆನ್ನಲ್ಲೇ ಇದೀಗ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಒಂದು ದಿನದ ಹಿಂದಷ್ಟೇ ಚಿತ್ರದ ನಿರ್ಮಾಪಕ ಗೋಕುಲಂ ಗೋಪಾಲನ್ ಅವರ ಚೆನ್ನೈ ಮತ್ತು ಕೊಚ್ಚಿಯಲ್ಲಿರುವ ಶ್ರೀ ಗೋಕುಲಂ ಚಿಟ್ಸ್ ಮತ್ತು ಫೈನಾನ್ಸ್ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದರು. ವಿದೇಶಿ ವಿನಿಮಯದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಅನುಮಾನದಡಿ ಗೋಪಾಲನ್ ಅವರ ವಿಚಾರಣೆಯನ್ನು ಮಾಡಿದ್ದರು. ಈ ಬೆನ್ನಲ್ಲೇ ನಿರ್ದೇಶಕ ಪೃಥ್ವಿರಾಜ್ ಅವರಿಗೆ ಐಟಿ ಇಲಾಖೆ ನೋಟಿಸ್ ನೀಡಿದೆ.
ಮಾರ್ಚ್ ಕೊನೆಯ ವಾರದಲ್ಲಿ ಅಂದ್ರೆ ಚಿತ್ರ ಬಿಡುಗಡೆಯಾದ 2-3 ದಿನದಲ್ಲಿಯೇ ಪೃಥ್ವಿರಾಜ್‌ಗೆ ಐಟಿ ಇಲಾಖೆ ನೋಟಿಸ್ ನೀಡಿದ್ದು ಈ ಹಿಂದೆ ಪೃಥ್ವಿರಾಜ್ ನಿರ್ಮಾಣದ ಚಿತ್ರಗಳ ಆದಾಯದ ಕುರಿತು ಲೆಕ್ಕವನ್ನು ನೀಡುವಂತೆ ಕೇಳಿದೆ. ಏಪ್ರಿಲ್ ಅಂತ್ಯದೊಳಗೆ ಕಳೆದ ಮೂರು ಸಿನಿಮಾಗಳ ಸಂಭಾವನೆಯ ಲೆಕ್ಕ ನೀಡುವಂತೆ ಗಡುವು ನೀಡಿದೆ ಎಂದು ವರದಿಗಳು ತಿಳಿಸಿವೆ.
2022ರ ದಾಳಿಗೆ ಸಂಬಂಧಿಸಿದಂತೆ ನೋಟಿಸ್
ಡಿಸೆಂಬರ್ 2022ರಲ್ಲಿ ಮಲಯಾಳಂ ಚಿತ್ರರಂಗದ ಅನೇಕ ನಿರ್ಮಾಪಕರ ಮನೆ ಮತ್ತು ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ವಂಚನೆ, ವಿದೇಶಗಳಲ್ಲಿನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯನ್ನು ಅನೇಕರು ಮಾಡಿದ್ದಾರೆ ಎಂದು ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಪೃಥ್ವಿರಾಜ್ ಸುಕುಮಾರನ್ ಮನೆ ಮತ್ತು ಕಚೇರಿಯನ್ನು ಕೂಡ ಆಗ ಪರಿಶೀಲಿಸಿದ್ದರು. ಆ ತನಿಖೆಯ ಮುಂದುವರೆದ ಭಾಗವಾಗಿ ಈಗ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಐಟಿ ಇಲಾಖೆ ಇನ್ನೊಮ್ಮೆ ನೋಟಿಸ್ ಕಳುಹಿಸಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಎಂಪುರಾನ್ ಚಿತ್ರದ ಭಾರೀ ವಿವಾದಕ್ಕೀಡಾಗಿತ್ತು. ಗುಜರಾತ್ ಗಲಭೆಗೆ ಸಂಬಂಧಿಸಿದ ದೃಶ್ಯಗಳನ್ನು ತಿರುಚಿ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ 24 ದೃಶ್ಯಗಳಿಗೆ ಚಿತ್ರತಂಡ ಕತ್ತರಿ ಹಾಕಿತ್ತು.