ಮಂಗಳೂರು: ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವಿಚಾರಣಾಧೀನ ಕೈದಿಯೊಬ್ಬ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾನೆ. ಎರಡು ವರ್ಷಗಳ ಹಿಂದೆ ಅತ್ಯಾಚಾರ ಯತ್ನ ಮತ್ತು ಕಳವು ಪ್ರಕರಣದಲ್ಲಿ ಬಂಧಿಯಾಗಿದ್ದ ಕೈದಿ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ.
ಜಿನ್ನಪ್ಪ ಪರವ ಜೈಲಿನಿಂದ ಪರಾರಿಯಾದ ಕೈದಿ. ಜಿನ್ನಪ್ಪ ಬೆಳ್ತಂಗಡಿ ತಾಲೂಕಿನ ಬೆಳ್ಳಾಲು ಗ್ರಾಮದ ನಿವಾಸಿ. ಇಂದು ಬೆಳಗಿನ ಜಾವ ಮೂರು ಗಂಟೆಯ ಸಮಯದಲ್ಲಿ ಕಾರಾಗೃಹದ ಕಾವಲು ಪೊಲೀಸರು ನಿದ್ದೆ ಹೋದ ಸಂದರ್ಭದಲ್ಲಿ ಹಳೆಯ ಜೈಲಿಗೆ ಹೋಗಿ ಗೋಡೆ ಹಾರಿ ವಿದ್ಯುತ್ ಕಂಬದ ಮೂಲಕ ಇಳಿದು ತಪ್ಪಿಸಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಎರಡು ವರ್ಷಗಳ ಹಿಂದೆ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಆರೋಪದಲ್ಲಿ ಬೆಳ್ತಂಗಡಿ ಪೊಲೀಸರು 2015 ಅಗಸ್ಟ್ 25 ರಂದು ಜಿನ್ನಪ್ಪನನ್ನು ಬಂಧಿಸಿದ್ದರು. ನಂತರ ಆತನನ್ನು ವಿಚಾರಣಾಧೀನ ಕೈದಿಯಾಗಿ ಮಂಗಳೂರು ಕಾರಾಗೃಹದಲ್ಲಿ ತನಿಖೆಗೆ ಒಳಪಡಿಸಲಾಗಿತ್ತು. ಜಿನ್ನಪ್ಪ ಜೈಲಿನಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.
ಇಂದು ಬೆಳಗ್ಗೆ ಪೊಲೀಸ್ ಸರ್ಪಗಾವಲು ಇದ್ರೂ ಜಿನ್ನಪ್ಪ ಪರಾರಿಯಾಗಿದ್ದು, ಪೊಲೀಸರ ಕರ್ತವ್ಯಲೋಪದ ಬಗ್ಗೆ ಭಾರೀ ಟೀಕೆಗೆ ವ್ಯಕ್ತವಾಗಿದೆ. ಜೈಲಿನೊಳಗೇ ಭೂಗತ ಪಾತಕಿಗಳಿಬ್ಬರ ಹತ್ಯೆ, ಭೂಗತ ಚಟುವಟಿಕೆ, ಕೈದಿಗಳಿಗೆ ಗಾಂಜಾ ಪೂರೈಕೆ ಮೂಲಕ ಕುಖ್ಯಾತಿಗೀಡಾಗಿದ್ದ ಮಂಗಳೂರಿನ ಕಾರಾಗೃಹ ಇದೀಗ ಕೈದಿ ಪರಾರಿಯಾಗುವ ಮೂಲಕ ಮತ್ತೊಂದು ಕಳಂಕವನ್ನು ಮೈಮೇಲೆ ಎಳೆದುಕೊಂಡಿದೆ.