ರಾಯಚೂರು: ಸ್ನೇಹಿತನನ್ನೇ ಕೊಲೆಗೈದ ಆರೋಪ ಹೊತ್ತಿದ್ದ ವಿಚಾರಣಾಧೀನ ಕೈದಿಯೊಬ್ಬ ಹೃದಯಾಘಾತದಿಂದ ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಕೊಲೆ ಪ್ರಕರಣದ ಆರೋಪಿ ಶಫಿವುದ್ದೀನ್( 30) ಮೃತ ಕೈದಿ. ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೆ ಕೊಲೆ ಮಾಡಿದ ಆರೋಪದಲ್ಲಿ ಶಫಿವುದ್ದೀನ್ ಜೈಲು ಪಾಲಾಗಿದ್ದನು. ಭಾನುವಾರ ಬೆಳಗ್ಗೆ ಎಸಿಡಿಟಿ ತೊಂದರೆ ಎಂದು ಕೈದಿ ಆಸ್ಪತ್ರೆಗೆ ದಾಖಲಾಗಿದ್ದ.
ಬಳಿಕ ಚಿಕಿತ್ಸೆ ಪಡೆದು ಮರಳಿ ಕಾರಾಗೃಹಕ್ಕೆ ಬಂದ ಮೇಲೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು, ಮತ್ತೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತವಾಗಿ ಕೈದಿ ಸಾವನ್ನಪ್ಪಿರುವುದಾಗಿ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ಕೈದಿ ಜೈಲಿನಲ್ಲಿದ್ದನು. ಆನಾರೋಗ್ಯದಿಂದ ಕೈದಿ ಮೃತಪಟ್ಟಿದ್ದರೂ ಆತನ ಸಂಬಂಧಿಕರು ಜೈಲಿನ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಗ್ಯದಲ್ಲಿ ಏರುಪೇರು ಆದಾಗ ಜೈಲಿನಲ್ಲಿ ಚಿಕಿತ್ಸೆಗೆ ಸಹಾಯ ಮಾಡದ ಹಿನ್ನೆಲೆ ಕೈದಿ ಮೃತಪಟ್ಟಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.