Bengaluru City

ಪ್ರತಿ ವಲಯದಲ್ಲೂ ಸಂಶೋಧನೆ ಅಭಿವೃದ್ಧಿಗೆ ಆದ್ಯತೆ: ಬೊಮ್ಮಾಯಿ

Published

on

Share this

-ಯುವ ಶಕ್ತಿ ಬಗ್ಗೆ ನನಗೆ ಅಪಾರ ನಂಬಿಕೆ ಇದೆ
-6,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಬೆಂಗಳೂರು: ಸುಸ್ಥಿರ ಬೆಳವಣಿಗೆ ಮತ್ತು ಹೂಡಿಕೆಗಳಿಗೆ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ ಹೊಸ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಸಹಭಾಗಿತ್ವಕ್ಕೆ ಸದಾ ಆಸಕ್ತಿ ತೋರುತ್ತಾ ಬಂದಿದ್ದು, ಭವಿಷ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಬೆಂಗಳೂರು ಅರಮನೆಯಲ್ಲಿ ಹಮ್ಮಿಕೊಂಡಿರುವ “ಉದ್ಯಮಿಯಾಗು ಉದ್ಯೋಗ ನೀಡು’ ಹಾಗೂ “ಕೈಗಾರಿಕಾ ಅದಾಲತ್’ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಪ್ರತಿ ವಲಯದಲ್ಲೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದ ಬೆಳವಣಿಗೆ ಆದ್ಯತೆ ನೀಡಬೇಕಾಗಿದ್ದು, ಈ ನಿಟ್ಟಿನಲ್ಲಿ ಹೂಡಿಕೆ ಮಾಡಲು ಕೈಗಾರಿಕೆಗಳಿಗೆ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೂಡಿಕೆ, ಉದ್ಯೋಗ ಮತ್ತು ಆವಿಷ್ಕಾರಕ್ಕೆ ನಮ್ಮ ಸರ್ಕಾರ ಒತ್ತು ನೀಡಲಿದೆ ಎಂದರು. ಇದನ್ನೂ ಓದಿ: ನೀರಜ್ ಚೋಪ್ರಾಗೆ ಕರ್ನಾಟಕ ಸರ್ಕಾರದಿಂದ ಸನ್ಮಾನ

ಯುವ ಶಕ್ತಿ ಬಗ್ಗೆ ನನಗೆ ಅಪಾರ ನಂಬಿಕೆ ಇದೆ. ಉದ್ಯಮ ಸ್ಥಾಪಿಸಿ ಸಹಸ್ರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ತಾಕತ್ತು ಇವರಲ್ಲಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ವಿದ್ಯಾರ್ಥಿಗಳೇ ಮುಂದೆ ಉದ್ಯಮಿಗಳಾಗಿ ಇಂಥ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕೂರುವರು. ಸಣ್ಣ ಮಟ್ಟದಲ್ಲಿ ಉದ್ಯಮ ಸ್ಥಾಪಿಸಿ ಅದನ್ನೇ ದೊಡ್ಡ ಮಟ್ಟಕ್ಕೆ ಕೊಂಡೊಯ್ದಿರುವ ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಣ್ಣ ಉದ್ಯಮಿಗಳ ಸಚಿವ ಎಂಟಿಬಿ ನಾಗಾರಾಜ ಅವರೇ ನಮ್ಮೆಲ್ಲರಿಗೂ ಉತ್ತಮ ಉದಹಾರಣೆ. ಅವರು ನಡೆದು ಬಂದ ಹಾದಿಯೇ ಯುವ ಜನರಿಗೆ ಪಾಠ. ಸಣ್ಣ ಹೆಜ್ಜೆ ಇಡುವ ಮೂಲಕ ದೊಡ್ಡದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ಸಣ್ಣ ಹೆಜ್ಜೆ ಇಡಲು ಇದು ಆರಂಭದ ಪ್ರಯತ್ನವಾಗಲಿದೆ. ಎಲ್ಲರೂ ಇದರ ಸದುಪಯೋಗಪಡಿಸಿಕೊಂಡರೆ ಸಾರ್ಥಕ ಎಂದು ಅಭಿಪ್ರಾಯಪಟ್ಟರು.

ಯುವಜನರಿಗೆ ನೆರವಾಗುವ ಉದ್ದೇಶದಿಂದ ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಕ್ರಮ ಮತ್ತು ಕೈಗಾರಿಕೆಗಳ ಸಮಸ್ಯೆ ಇತ್ಯರ್ಥಗೊಳಿಸಲು ಕೈಗಾರಿಕಾ ಅದಾಲತ್ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳಿಂದಾಗಿಯೇ ರಾಜ್ಯ ಇಂದು ದೇಶದಲ್ಲೇ ನಂಬರ್ 1 ಕೈಗಾರಿಕಾ ಸ್ನೇಹಿ ರಾಜ್ಯ ಎನಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಕ್ಷದ ವರಿಷ್ಠರು ಒಪ್ಪಿದರೆ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುತ್ತೇನೆ: ಬಿ.ವೈ ರಾಘವೇಂದ್ರ

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಯುವಜನರು ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಮಾಹಿತಿ ಒದಗಿಸಲು ನಮ್ಮ ಇಲಾಖೆ ಒಂದು ದಿನದ ಕಾರ್ಯಾಗಾರ ಆಯೋಜಿಸಿದೆ. ಬೆಂಗಳೂರಿನ ನಂತರ, ಕಲಬುರಗಿ, ಮೈಸೂರು, ಬೆಳಗಾವಿ, ಕರಾವಳಿ ಭಾಗದ ಮಂಗಳೂರು ಹಾಗೂ ತುಮಕೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಆ ಭಾಗದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಆರಂಭಿಸಬಹುದಾದ ಉದ್ಯಮಗಳ ಮಾಹಿತಿ ನೀಡಲಾಗುತ್ತದೆ. ಮುಖ್ಯವಾಗಿ ಸ್ಥಳೀಯ ಯಶಸ್ವಿ ಉದ್ಯಮಿಗಳ ಮಾರ್ಗದರ್ಶನ ಒದಗಿಸಲಾಗುವುದು ಎಂದರು.

ನಮ್ಮ ವಿದ್ಯಾರ್ಥಿಗಳಿಗೆ ನಮ್ಮವರೇ ಆದ ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿಯವರು ದೊಡ್ಡ ಪ್ರೇರಣೆ ಆಗಬೇಕು. ಎಂಜನಿಯರ್ ಪದವಿ ಪಡೆದು ಟಾಟಾ ಕಂಪನಿಯಲ್ಲಿ ಉದ್ಯೋಗ ಮಾಡಿ, ನಂತರದ ದಿನಗಳಲ್ಲಿ ಸ್ವಂತ ಐಟಿ ಕಂಪನಿ ಸ್ಥಾಪಿಸಿ ಜಗದ್ವಿಖಾತರಾದರು. ಮತ್ತೊಂದು ಉದಾಹರಣೆ ಅಂದರೆ ವಿಜಯ ಸಂಕೇಶ್ವರ್ ಅವರು. ಒಂದು ಲಾರಿಯಿಂದ ಆರಂಭವಾದ ಅವರ ಲಾಜಿಸ್ಟಿಕ್ ಉದ್ಯಮ ಇಂದು ದೇಶದಲ್ಲಿ ಅತಿ ಎತ್ತರಕ್ಕೆ ಬೆಳೆದಿದೆ. ಸಾಧಿಸುವ ಛಲ ಇದ್ದಾಗ ಮಾತ್ರ ಗುರಿ ಸಾಧ್ಯ. ಉದ್ಯಮ ಸ್ಥಾಪಿಸಿ ಮಾಲೀಕರಾಗಬೇಕೇ ಅಥವಾ ಉದ್ಯೋಗಕ್ಕೆ ಮತ್ತೊಬ್ಬರ ಕೈ ಕೆಳಗೆ ದುಡಿಯೇಬೇಕೇ ಎಂಬುದನ್ನು ವಿದ್ಯಾರ್ಥಿಗಳು ನಿರ್ಧರಿಸಬೇಕು. ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಿಂದೆ ನಡೆದಿದ್ದ ಎರಡು ಜಾಗತಿಕ ಹೂಡಿಕೆದಾರರ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದ್ದು, ಮುಂದಿನ ವರ್ಷ ನವೆಂಬರ್‍ನಲ್ಲಿ ನಡೆಯಲಿರುವ ವಿಶ್ವ ಜಾಗತಿಕ ಹೂಡಿಕೆದಾರರ ಸಮಾವೇಶವೂ ನಿಮ್ಮೆಲ್ಲರ ಸಹಕಾರದೊಂದಿಗೆ ಅತ್ಯಂತ ಯಶಸ್ವಿ ಆಗುವ ವಿಶ್ವಾಸ ನನಗಿದೆ ಎಂದು ನುಡಿದರು. ಇದನ್ನೂ ಓದಿ: ನನ್ನ ಅಭಿಮಾನಿಗಳಿಂದಲೇ ನಾನು ಇಲ್ಲಿ ಇರೋದು: ಕಿಚ್ಚ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಪರಿಣಾಮ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. ಇದೀಗ ಯುವ ಉದ್ಯಮಿಗಳನ್ನು ಸೃಷ್ಟಿಸಲು ಮತ್ತು ಕೈಗಾರಿಕಾ ವಿವಾದಗಳನ್ನು ಬಗೆಹರಿಸಲು ಆದ್ಯತೆ ನೀಡುವ ಮೂಲಕ ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕವನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್ ಅಶ್ವಥ್ ನಾರಾಯಾಣ್ ಮಾತನಾಡಿ, ಕೌಶಲ್ಯ ಅಭಿವೃದ್ಧಿ ಮತ್ತು ಪ್ರಗತಿಪರ ನೀತಿಗಳ ಮೂಲಕ ಎಲ್ಲರಿಗೂ ಶಿಕ್ಷಣ ದೊರೆಯುವಂತಾದರೆ ಕೈಗಾರಿಕೀಕರಣ ಮತ್ತು ಉದ್ಯಮಶೀಲತೆಯಲ್ಲಿ ಅತಿ ದೊಡ್ಡ ಬದಲಾವಣೆ ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ಯಮಗಳ ಸಚಿವ ಎನ್. ನಾಗರಾಜು ಮಾತನಾಡಿ, ಉತ್ಸಾಹಿ ಯುವ ಮಿತ್ರರು ಉದ್ಯಮಿಗಳಾಗಿ ರೂಪುಗೊಳ್ಳಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಾ.ಸಿ.ಎ.ಎನ್.ಅಶ್ವಥ್ ನಾರಾಯಣ, ಎಂಟಿಬಿ ನಾಗರಾಜು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ. ಇವಿ ರಣಮಣರೆಡ್ಡಿ, ಎಂಎಸ್‍ಎಂಇ ನಿರ್ದೇಶಕರಾದ ಆರ್. ವಿನೋತ್ ಪ್ರಿಯಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಕೆಐಎಡಿಬಿ ಸಿಇಓ ಡಾ.ಎನ್ ಶಿವಶಂಕರ್ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications