ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವುದಿಲ್ಲ. 75 ವರ್ಷಕ್ಕೆ ರಾಜಕೀಯ ನಿವೃತ್ತಿ ಎಂದು ಅವರೇ ನಿರ್ಣಯ ಮಾಡಿರುವ ಹಿನ್ನೆಲೆ ತಮ್ಮ ಬಳಿಕ ಪ್ರಧಾನಿ ಅಭ್ಯರ್ಥಿ ಯಾರು ಎನ್ನುವುದು ಘೋಷಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸವಾಲು ಹಾಕಿದ್ದಾರೆ.
ಶುಕ್ರವಾರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಶನಿವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ 75 ವರ್ಷ ತುಂಬುತ್ತಿದೆ. 75 ವರ್ಷದ ಬಳಿಕ ರಾಜಕೀಯ ನಿವೃತ್ತಿ ಪಡೆಯಬೇಕು ಎಂದು ಅವರೇ ನಿರ್ಣಯ ಮಾಡಿದ್ದಾರೆ. ಇದೇ ಕಾರಣ ನೀಡಿ ಎಲ್.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ ಸೇರಿದಂತೆ ಹಿರಿಯ ನಾಯಕರನ್ನು ತೆರೆ ಮರೆಗೆ ಸರಿಸಿದ್ದಾರೆ. ಈಗ 75 ವರ್ಷ ತುಂಬುತ್ತಿರುವ ಅವರು ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋಷಿಸಬೇಕು ಎಂದರು. ಇದನ್ನೂ ಓದಿ: ಜೈಲಿನಿಂದ ಹೊರ ಬರುತ್ತಿದ್ದಂತೆ ಟೆಂಪಲ್ ರನ್ – ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕೇಜ್ರಿವಾಲ್!
- Advertisement
ನರೇಂದ್ರ ಮೋದಿ ಅವರು ಒಂದು ದೇಶ ಒಂದು ನಾಯಕ ಎನ್ನುವ ಅಜೆಂಡಾ ಜಾರಿ ಮಾಡುವ ಹುನ್ನಾರ ನಡೆಯುತ್ತಿದೆ. ಪಕ್ಷದಲ್ಲಿ ಇವರ ಮುಂದಿನ ಟಾರ್ಗೆಟ್ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್. ಫಲಿತಾಂಶ ಬಂದ ಎರಡು ತಿಂಗಳ ಬಳಿಕ ಅವರನ್ನು ತೆರೆ ಮರೆಗೆ ಸರಿಸಲಾಗುವುದು ಎಂದು ಭವಿಷ್ಯ ನುಡಿದರು. ಮೋದಿ ಗೃಹ ಸಚಿವ ಅಮಿತ್ ಶಾರನ್ನು ಮುಂದಿನ ಪ್ರಧಾನಿ ಮಾಡುವ ಚಿಂತನೆಯಲ್ಲಿದ್ದಾರೆ. ಆದರೆ ಮೋದಿ ಗ್ಯಾರಂಟಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ನೀವೂ ಪ್ರಧಾನಿಯಾಗದಿದ್ದರೆ ನಿಮ್ಮ ಗ್ಯಾರಂಟಿ ಯಾರು ನಿಭಾಯಿಸುತ್ತಾರೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
- Advertisement
ಆಮ್ ಅದ್ಮಿ ಎನ್ನುವುದು ಚಿಕ್ಕ ಪಕ್ಷ. ನಮ್ಮ ಪಕ್ಷವನ್ನು ಮುಗಿಸಲು ಪ್ರಧಾನಿ ಮೋದಿ ಯಾವ ಅವಕಾಶವನ್ನೂ ಬಿಟ್ಟಿಲ್ಲ. ನಮ್ಮ ಎಲ್ಲ ಪ್ರಮುಖ ನಾಯಕರನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡಿದರು. ಆಪ್ ರೀತಿಯಲ್ಲಿ ದೊಡ್ಡ ಪಕ್ಷದ ನಾಯಕರು ಜೈಲಿಗೆ ಹೋಗಿದ್ದರೆ, ಪಕ್ಷ ಮುಗಿದು ನಾಶವಾಗುತ್ತಿತ್ತು. ಅವರು ಆಪ್ ಪಕ್ಷ ನಾಶವಾಗುತ್ತೆ ಅಂದುಕೊಂಡರು. ಆದರೆ ಅದು ಸಾಧ್ಯವಾಗಲಿಲ್ಲ. ಕಾರಣ ಆಪ್ ಎನ್ನುವುದು ಒಂದು ಚಿಂತನೆ ಎಂದರು. ಇದನ್ನೂ ಓದಿ: ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕಿದೆ: 50 ದಿನಗಳ ಬಳಿಕ ಜೈಲಿನಿಂದ ಹೊರಬಂದ ಕೇಜ್ರಿವಾಲ್ ಪ್ರತಿಕ್ರಿಯೆ
ಭವಿಷ್ಯದಲ್ಲಿ ಆಪ್ ಬಿಜೆಪಿಗೆ ಸವಾಲೊಡ್ಡಲಿದೆ ಎನ್ನುವುದು ಅವರಿಗೆ ಗೊತ್ತಿದೆ. ಅದಕ್ಕಾಗಿ ಈಗಲೇ ನಮ್ಮನ್ನು ಮುಗಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮನ್ನು ಮುಗಿಸುವ ಪ್ರಯತ್ನ ಮಾಡಿದರೆ, ದೇಶದ ಜನರು ಒಪ್ಪುವುದಿಲ್ಲ. ಕಳೆದ 75 ವರ್ಷದಲ್ಲಿ ಎಂದು ಯಾವ ಪ್ರಧಾನಿಯೂ ಪಕ್ಷವೊಂದನ್ನು ಇಷ್ಟು ಟಾರ್ಗೆಟ್ ಮಾಡಿರಲಿಲ್ಲ ಎಂದು ತಿಳಿಸಿದರು.
ಭ್ರಷ್ಟಾಚಾರ ಮಾಡಿದ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಳಿಕ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎನ್ನುತ್ತಾರೆ. ಭ್ರಷ್ಟಾಚಾರ ವಿರುದ್ಧ ಹೋರಾಡುವುದು ಹೇಗೆ ಎಂದು ಕೇಜ್ರಿವಾಲ್ ನೋಡಿ ಕಲಿಯಬೇಕು ನೀವೂ. ನಮ್ಮ ಮಂತ್ರಿಯೊಬ್ಬರ ವಿರುದ್ಧ ಲಂಚ ಪಡೆದ ಆರೋಪ ಬಂತು. ಅದು ಸಾರ್ವಜನಿಕ ವಲಯದಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅದಾಗ್ಯೂ ನಾವು ಅದನ್ನು ಸಿಬಿಐ ತನಿಖೆಗೆ ನೀಡಿದೆವು. ನೀವೂ ದೇಶದ ಕಳ್ಳರನ್ನು ಪಕ್ಷಕ್ಕೆ ಸೇರಿಸಿಕೊಂಡು ನನ್ನ ಜೈಲಿಗೆ ಕಳಿಹಿಸಿದ್ದೀರಿ. ಈ ದೇಶದ ಜನರನ್ನು ದಡ್ಡರು ಅಂದುಕೊಳ್ಳಬೇಡಿ, ಎಲ್ಲರಿಗೆ ಎಲ್ಲವೂ ಗೊತ್ತಿದೆ. ಇದನ್ನೂ ಓದಿ: ದೇವರ ಆಶೀರ್ವಾದ ನನ್ನ ಜೊತೆಗಿದೆ- ಜೈಲಿನಿಂದ ಹೊರ ಬಂದ ಕೇಜ್ರಿವಾಲ್ ಫಸ್ಟ್ ರಿಯಾಕ್ಷನ್
ನನ್ನ ಬಂಧಿಸುವ ಮೂಲಕ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು. ಬಂಧನದ ಬಳಿಕವೂ ರಾಜೀನಾಮೆ ನೀಡಿಲ್ಲ ಎಂದು ಆರೋಪಿಸಿದರು. ನಾನು ಉದ್ದೇಶಪೂರ್ವಕವಾಗಿ ರಾಜೀನಾಮೆ ನೀಡಲಿಲ್ಲ. ನನಗೆ ಅಧಿಕಾರದ ಆಸೆ ಇಲ್ಲ. ನಾನು ಆದಾಯ ತೆರಿಗೆ ಇಲಾಖೆಯಲ್ಲಿ ಕಮಿಷನರ್ ಆಗಿದ್ದೆ. ಅದನ್ನು ಬಿಟ್ಟು ಬಂದಿದ್ದೇನೆ. ಅಧಿಕಾರದ ಆಸೆ ಇದ್ದಿದ್ದರೆ, ಅದನ್ನು ಬಿಡುತ್ತಿರಲಿಲ್ಲ. ದೆಹಲಿಯ ಜನರು ನನಗೆ ಮೊದಲು ಅಧಿಕಾರ ನೀಡಿದರು. ಬಹುಮತದ ಕಾರಣ ನಾನು ಅದಕ್ಕೂ ರಾಜೀನಾಮೆ ನೀಡಿದ್ದೆ. ಇಂದು ಭಾರಿ ಬಹುಮತ ಪಡೆದು ದೆಹಲಿಯಲ್ಲಿ ಗೆದ್ದಿದ್ದೇವೆ. ನಮ್ಮನ್ನು ಮುಂದಿನ 20 ವರ್ಷ ಸೋಲಿಸಲು ಸಾಧ್ಯವಿಲ್ಲ ಎಂದು ಗೊತ್ತಿದೆ. ಸುಳ್ಳು ಕೇಸ್‌ನಲ್ಲಿ ಜೈಲಿಗೆ ಕಳಿಹಿಸಿದರೆ ರಾಜೀನಾಮೆ ನೀಡಬಹುದು ಅಂದುಕೊಂಡರು. ಅದಕ್ಕೆ ನಾನು ರಾಜೀನಾಮೆ ನೀಡಲಿಲ್ಲ. ಜೈಲಿನಿಂದ ಸರ್ಕಾರ ನಡೆಸಿದೆ. ನಾನು ರಾಜೀನಾಮೆ ನೀಡಿದ್ದರೆ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಇದನ್ನೆ ಮಾಡುತ್ತಿತ್ತು ಎಂದು ಆರೋಪಿಸಿದರು.
140 ಕೋಟಿ ಜನರಿಗೆ ಬಳಿ ಭಿಕ್ಷೆ ಬೇಡಲು ಬಂದಿದ್ದೇನೆ. ನನ್ನ ಭಾರತವನ್ನು ಉಳಿಸಿ ಎಂದು ಕೇಳಿಕೊಳ್ಳಲು ಬಂದಿದ್ದೇನೆ. ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದಗಳು ಹೇಳಲು ಬಯಸುತ್ತೇನೆ. 21 ದಿನ ಸಮಯ ನೀಡಿದೆ. ದಿನಕ್ಕೆ 24 ಗಂಟೆ ಇದೆ. ನಾನು ದಿನದ 21 ಗಂಟೆ ಕೆಲಸ ಮಾಡಲಿದ್ದೇನೆ. ಪೂರ್ಣ ಪ್ರಮಾಣದಲ್ಲಿ ನಾನು ಹೋರಾಡುತ್ತೇನೆ. ಇಂಡಿಯಾ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬರಲಿದೆ. ದೆಹಲಿಗೆ ಪೂರ್ಣ ರಾಜ್ಯದ ಸ್ವಾತಂತ್ರ್ಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.