ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ಥಾಣೆ ಮತ್ತು ದಿವಾವನ್ನು ಸಂಪರ್ಕಿಸುವ ಎರಡು ಹೆಚ್ಚುವರಿ ರೈಲು ಮಾರ್ಗಗಳನ್ನು ಇಂದು ಸಂಜೆ 4.30ಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಉದ್ಘಾಟನೆ ಬಳಿಕ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಈ ರೈಲು ಮಾರ್ಗಗಳನ್ನು ಸುಮಾರು 620 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಥಾಣೆ ಮತ್ತು ದಿವಾ ನಡುವಿನ ರೈಲು ಮಾರ್ಗಗಳು ಮುಂಬೈ ನಗರ ಸಾರಿಗೆ ಯೋಜನೆಯ ಒಂದು ಭಾಗವಾಗಿದೆ. ಹೆಚ್ಚುವರಿ ಎರಡು ರೈಲು ಮಾರ್ಗಗಳು ಪ್ರಾದೇಶಿಕ ಮತ್ತು ದೂರದ ರೈಲುಗಳನ್ನು ಪ್ರತ್ಯೇಕಿಸಲು 2008ರಲ್ಲಿ ಅನುಮೋದನೆಯನ್ನು ಪಡೆಯಲಾಗಿತ್ತು. ಇದನ್ನೂ ಓದಿ: ಮುಂಬೈ-ನವಿ ಮುಂಬೈಗೆ ವಾಟರ್ ಟ್ಯಾಕ್ಸಿ ಸರ್ವಿಸ್
ಇದು 1.4 ಕಿ.ಮೀ ಉದ್ದದ ರೈಲು ಮೇಲ್ಸೇತುವೆ, ಮೂರು ಪ್ರಮುಖ ಸೇತುವೆಗಳು, 21 ಚಿಕ್ಕ ಸೇತುವೆಗಳನ್ನು ಒಳಗೊಂಡಿದೆ ಮತ್ತು ಮುಂಬೈನಲ್ಲಿ ಪ್ರಾದೇಶಿ ರೈಲುಗಳ ಸಂಚಾರದೊಂದಿಗೆ ದೀರ್ಘ-ದೂರ ರೈಲುಗಳ ಸಂಚಾರದ ಅಡಚಣೆಯನ್ನು ತಡೆಯುವ ನಿರೀಕ್ಷೆಯಿದೆ. ಕಲ್ಯಾಣ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSTM) ನಡುವೆ ಈ ಮೊದಲೇ ಇರುವ ನಾಲ್ಕು ಟ್ರ್ಯಾಕ್‍ಗಳಲ್ಲಿ, ಎರಡು ಟ್ರ್ಯಾಕ್‍ಗಳನ್ನು ನಿಧಾನವಾದ ಸ್ಥಳೀಯ ರೈಲುಗಳಿಗೆ, ಇನ್ನೇರಡು ಟ್ರ್ಯಾಕ್‍ಗಳನ್ನು ವೇಗದ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳಿಗೆ ಬಳಸಲಾಗಿದೆ. ಇದನ್ನೂ ಓದಿ: ಡೆಲ್ಲಿ To ಲಂಡನ್ ಬಸ್ ಟೂರ್ – 70 ದಿನಗಳಲ್ಲಿ 18 ದೇಶ ಸುತ್ತುವ ಅವಕಾಶ
ಈ ಹೊಸ ಮಾರ್ಗಗಳು ನಗರದಲ್ಲಿ 36 ಹೊಸ ಉಪವಿಭಾಗದ ರೈಲುಗಳನ್ನು ಪರಿಚಯಿಸಲು ಅನುವು ಮಾಡಿಕೊಡುತ್ತದೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSTM)-ಕಲ್ಯಾಣ/ಕರ್ಜಾತ್ ಮತ್ತು ಕಾಸರ ನಡುವಿನ ಜನಸಂದಾಣಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ, ವರ್ಷಾಂತ್ಯದ ವೇಳೆಗೆ 80 ರಿಂದ 100 ಸ್ಥಳೀಯ ರೈಲು ಸೇವೆಗಳನ್ನು ಆರಂಭಿಸಿ ರೈಲ್ವೇ ಅನುಕೂಲ ಮಾಡಿಕೊಡುವ ಯೋಜನೆ ಹೊಂದಲಾಗಿದೆ.