– ದ್ವೇಷವನ್ನು ಬಿಡಿ, ಜಾಲತಾಣಗಳನ್ನಲ್ಲ ಎಂದ ರಾಹುಲ್
ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಬಿಟ್ಟುಬಿಡಲು ಯೋಚಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಅಚ್ಚರಿಯ ವಿಷಯವನ್ನು ತಿಳಿಸಿದ್ದಾರೆ.
ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಪ್ರಧಾನಿ ನರೇಂದ್ರ ಮೋದಿ, ಇದ್ದಕ್ಕಿದ್ದಂತೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೇವಲ ಎರಡು ಸಾಲುಗಳನ್ನು ಬರೆಯುವ ಮೂಲಕ ಈ ವಿಚಾರವನ್ನು ತಮ್ಮ ಅಭಿಮಾನಿಗಳು ಹಾಗೂ ಹಿಂಬಾಲಕರೊಂದಿಗೆ ಮೋದಿ ಹಂಚಿಕೊಂಡಿದ್ದಾರೆ.
Advertisement
Advertisement
ಈ ಕುರಿತು ಟ್ವೀಟ್ ಮಾಡುತ್ತಿದ್ದಂತೆ ಕೇವಲ ಅರ್ಧ ಗಂಟೆಯಲ್ಲಿ 6 ಸಾವಿರಕ್ಕೂ ಹೆಚ್ಚು ಜನ ಇದನ್ನು ರೀ ಟ್ವೀಟ್ ಮಾಡಿದ್ದು, ಸುಮಾರು 19 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ.
Advertisement
ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿರುವ ಅವರು, ಈ ಭಾನುವಾರದಿಂದ ಸಾಮಾಜಿಕ ಜಾಲತಾಣಗಳ ಖಾತೆಗಳಿಂದ ದೂರ ಉಳಿಯಲು ಚಿಂತಿಸುತ್ತಿದ್ದೇನೆ. ಫೇಸ್‍ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಂ ಹಾಗೂ ಯೂಟ್ಯೂಬ್‍ಗಳಿಂದ ದೂರ ಉಳಿಯಬೇಕೆಂದು ಚಿಂತಿಸಿದೆ. ಈ ಕುರಿತು ಮುಂದೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
Advertisement
This Sunday, thinking of giving up my social media accounts on Facebook, Twitter, Instagram & YouTube. Will keep you all posted.
— Narendra Modi (@narendramodi) March 2, 2020
ದೇಶದಲ್ಲಿನ ಆಗುಹೋಗುಗಳು, ತಾವು ಭಾಗವಹಿಸಿದ ಕಾರ್ಯಕ್ರಮಗಳು, ತಮ್ಮ ಅನಿಸಿಕೆ, ದೇಶವಾಸಿಗಳ ಬಳಿ ಹಂಚಿಕೊಳ್ಳಬೇಕಾದ ವಿಚಾರಗಳನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ದೂರ ಉಳಿಯುವ ಮಾತುಗಳನ್ನಾಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಪ್ರಧಾನಿ ಮೋದಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವದ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಸುಮಾರು 53.3 ಮಿಲಿಯನ್(5.33 ಕೋಟಿ) ಹಿಂಬಾಲಕರನ್ನು ಹೊಂದಿದ್ದು, ಫೇಸ್‍ಬುಕ್‍ನಲ್ಲಿ 44 ಮಿಲಿಯನ್(4.40 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಸಹ ವಿಶ್ವದ ಪ್ರಭಾವಿ ನಾಯಕರಾಗಿದ್ದು, 30 ಮಿಲಿಯನ್(3 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್‍ಸ್ಟಾಗ್ರಾಮ್‍ನಲ್ಲಿ 14.9 ಮಿಲಿಯನ್(1.49 ಕೋಟಿ) ಹಿಂಬಾಲಕರನ್ನು ಹೊಂದಿದ್ದಾರೆ. ಜನವರಿ 2009ರಂದು ಪ್ರಧಾನಿ ಮೋದಿ ಟ್ವಿಟ್ಟರ್ ಖಾತೆ ತೆರೆದಿದ್ದರು. ಆದರೆ ಇದೀಗ ದೇಶದಲ್ಲೇ ಅತೀ ಹೆಚ್ಚು ಹಿಂಬಾಲಕರನ್ನು ಗಳಿಸಿದ್ದಾರೆ.
Give up hatred, not social media accounts. pic.twitter.com/HDymHw2VrB
— Rahul Gandhi (@RahulGandhi) March 2, 2020
ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ಕುರಿತ ಪ್ರಧಾನಿ ಮೋದಿ ನಿರ್ಧಾರದ ಟ್ವೀಟ್‍ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಪ್ರತಿಕ್ರಿಯಿಸಿದ್ದು, ದ್ವೇಷವನ್ನು ಬಿಡಬೇಕೇ ಹೊರತು ಸಾಮಾಜಿಕ ಜಾಲತಾಣಗಳ ಖಾತೆಗಳನ್ನಲ್ಲ ಎಂದು ಟಾಂಗ್ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಹಲವರು ಸಾಮಾಜಿಕ ಜಾಲತಾಣಗಳಿಂದ ದೂರ ಹೋಗಬೇಡಿ ಸರ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ #NoSir ಟ್ರೆಂಡಿಂಗ್‍ನಲ್ಲಿದೆ.