– ಪ್ರಧಾನಿ ವಿದೇಶ ಪ್ರವಾಸದ ಬಗ್ಗೆ ಅಮಿತ್ ಶಾ ವಿವರಣೆ
– ಟರ್ಮಿನಲ್‍ನಲ್ಲೇ ವಿಶ್ರಾಂತಿ, ಸ್ನಾನ
ನವದೆಹಲಿ: ಗೃಹ ಸಚಿವ ಅಮಿತ್ ಶಾ ಮೋದಿಯವರ ಸರಳತೆ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಈ ಕುರಿತು ಮಾತನಾಡಿರುವ ಅವರು, ಹಣ ವ್ಯಯವಾಗುವುದನ್ನು ತಡೆಯುವುದು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಆದ್ಯತೆಯಾಗಿದೆ. ವಿದೇಶ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದಾಗ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಪಂಚತಾರಾ ಹೋಟೆಲ್ ಬುಕ್ ಮಾಡುವುದಿಲ್ಲ. ಬದಲಿಗೆ ರಾತ್ರಿ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿಯೇ ಉಳಿದುಕೊಂಡು, ವಿಶ್ರಾಂತಿ ಪಡೆದು, ಅಲ್ಲಿಯೇ ಸ್ನಾನ ಮಾಡಿ ಮುಂದಿನ ಕೆಲಸಕ್ಕೆ ತೆರಳುತ್ತಾರೆ ಎಂದು ವಿವರಿಸಿದ್ದಾರೆ.
Advertisement
Advertisement
ತಾಂತ್ರಿಕ ಕಾರಣಗಳಿಂದ ವಿಮಾನ ಸ್ಥಗಿತಗೊಂಡ ಸಂದರ್ಭದಲ್ಲಿ ಅಥವಾ ವಿಮಾನಕ್ಕೆ ಇಂಧನ ತುಂಬಿಸುವ ಸಂದರ್ಭದಲ್ಲಿ ಮೋದಿಯವರು ಯಾವುದೇ ಹೋಟೆಲಿಗೆ ತೆರಳುವುದಿಲ್ಲ. ಬದಲಿಗೆ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿಯೇ ಉಳಿದುಕೊಳ್ಳುತ್ತಾರೆ. ಆದರೆ ಇತರೆ ದೇಶದ ಪ್ರಧಾನಿಗಳು ಹಾಗೂ ಅವರ ನಿಯೋಗ ಪಂಚತಾರಾ ಹೋಟೆಲ್‍ನಲ್ಲಿ ತಂಗುತ್ತದೆ ಎಂದು ವಿವರಿಸಿದರು.
Advertisement
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದರು. ಆಗ ವಿಮಾನಕ್ಕೆ ಇಂಧನ ತುಂಬಿಸುವ ಸಲುವಾಗಿ ರಾತ್ರಿ ಉಳಿದುಕೊಳ್ಳಲು ಹೋಟೆಲ್ ಬುಕ್ ಮಾಡಲಾಗಿತ್ತು. ಆದರೆ ಮೋದಿಯವರು ಹೋಟೆಲ್‍ನಲ್ಲಿ ಉಳಿದುಕೊಳ್ಳಲಿಲ್ಲ, ಬದಲಿಗೆ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿಯೇ ಉಳಿದುಕೊಂಡಿದ್ದರು. ಪ್ರಧಾನಿ ಮೋದಿ ಈ ವರೆಗೆ ವಿಮಾನದಲ್ಲಿ ತಾಂತ್ರಿಕ ದೋಷವಾದಾಗ ಹೋಟೆಲ್ ಬುಕ್ ಮಾಡಿಕೊಂಡು ಉಳಿದಿಲ್ಲ ಎಂದು ಶಾ ತಿಳಿಸಿದರು.
Advertisement
ಪ್ರಧಾನಿ ಮೋದಿಯವರೊಂದಿಗೆ ಅಧಿಕಾರಿಗಳ ತಂಡ ತೆರಳಿದಾಗ 4-5 ಜನ ಅಧಿಕಾರಿಗಳಿದ್ದರೆ ಕಾರ್ ಬಳಸುತ್ತಾರೆ. ಇನ್ನೂ ಹೆಚ್ಚು ಜನ ಇದ್ದರೆ ಬಸ್ ಅಥವಾ ದೊಡ್ಡ ವಾಹನ ಬಳಸುವಂತೆ ಮೋದಿ ಸೂಚಿಸುತ್ತಾರೆ. ಮೋದಿಯವರು ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಕಟ್ಟುನಿಟ್ಟಿನಿಂದ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ವಿದೇಶಕ್ಕೆ ತೆರಳುವಾಗ ತಮ್ಮ ಅಧಿಕಾರಿ ವರ್ಗದ ಪೈಕಿ ಕೇವಲ ಶೇ.20 ಜನರನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರು ಬಳಸುವುದನ್ನು ಸಹ ಅವರು ವಿರೋಧಿಸುತ್ತಾರೆ. ಇತ್ತೀಚೆಗೆ ಅಧಿಕಾರಿಗಳು ಹೆಚ್ಚು ಕಾರುಗಳನ್ನು ಬಳಸುತ್ತಿದ್ದರು ಆದರೆ ಇದೀಗ ಬಸ್ ಅಥವಾ ದೊಡ್ಡ ವಾಹನವನ್ನು ಬಳಸುತ್ತಾರೆ ಎಂದು ವಿವರಿಸಿದರು.