ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆದರಣೀಯ ವ್ಯಕ್ತಿ. ಅಷ್ಟು ಹಗರಣಗಳು ನಡೆದರೂ ಮನಮೋಹನ್ ಸಿಂಗ್ ಮೇಲೆ ಒಂದು ಕಪ್ಪು ಚುಕ್ಕೆಯೂ ಬರಲಿಲ್ಲ. ರೇನ್ ಕೋಟ್ ಹಾಕಿ ಸ್ನಾನ ಮಾಡುವುದು ಮನಮೋಹನ್‍ಗೆ ಚೆನ್ನಾಗಿ ಗೊತ್ತು ಅಂತಾ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ನೋಟ್ ಬ್ಯಾನ್, ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಯಾವುದೇ ರಾಜಕೀಯ ಪಕ್ಷವೊಂದರ ವಿರುದ್ಧದ ಹೋರಾಟವಲ್ಲ ಎಂದು ಹೇಳಿದರು. ಮನಮೋಹನ್ ಸಿಂಗ್ ವಿರುದ್ಧದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ನಡುವೆಯೇ ಸಭಾತ್ಯಾಗ ಮಾಡಿದರು.
Advertisement
ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣದಂತೆಯೇ ಇಂದು ಕೂಡಾ ಮೋದಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು. ವಿಪಕ್ಷಗಳು 70 ವರ್ಷದ ಬಗ್ಗೆ ಟೀಕೆ ಮಾಡುತ್ತಿವೆ. ಆದರೆ ನನ್ನ ಸರ್ಕಾರಕ್ಕೆ ಈಗ ಕೇವಲ ಎರಡೂವರೆ ವರ್ಷ. ನಿಮ್ಮ ಅವಧಿಯ ಟಾಯ್ಲೆಟ್‍ಗಳಿಗೆ ಬೀಗ ಹಾಕಿದ್ನಾ?, ನಿಮ್ಮ ಅವಧಿಯ ರಸ್ತೆ ಕಿತ್ತು ಹಾಕಿದ್ನಾ?. ಎಲ್ಲದಕ್ಕೂ ನಾನೇ ಕಾರಣ ಎಂದು ಯಾಕೆ ಅಂದ್ಕೋತೀರಿ ಎಂದು ಮೋದಿ ಪ್ರಶ್ನಿಸಿದರು.
Advertisement
1971ರಲ್ಲಿ ಇಂದಿರಾ ಗಾಂಧಿಗೆ ಅಂದಿನ ಹಣಕಾಸು ಸಚಿವರು ನೋಟ್ ಬ್ಯಾನ್‍ಗೆ ಸಲಹೆ ನೀಡಿದ್ದರು. ಆದರೆ ಇಂದಿರಾಗಾಂಧಿ ಅವರು ಇದನ್ನು ತಿರಸ್ಕರಿಸಿದ್ದರು. 1972ರಲ್ಲಿ ಜ್ಯೋತಿ ಬಸು ನೋಟ್ ಬ್ಯಾನ್ ಬಗ್ಗೆ ಮಾತನಾಡಿದರು. 1981ರಲ್ಲಿ ಹರ್‍ಕಿಶನ್ ಸಿಂಗ್ ಸುರ್ಜಿತ್ ಉಲ್ಲೇಖಿಸಿದ್ದರು ಎಂದು ಮೋದಿ ಹೇಳಿದರು.
Advertisement
ನಾನು ಓಕೆ, ಆರ್‍ಬಿಐಗೆ ವಿರೋಧ ಯಾಕೆ?: ನೋಟ್ ಬ್ಯಾನ್‍ಗೆ ಸಂಬಂಧಪಟ್ಟ ವಿಚಾರದಲ್ಲಿ ನನ್ನ ಹಾಗೂ ಸರ್ಕಾರದ ವಿರುದ್ಧದ ಟೀಕೆಗಳು ನನಗೆ ಅರ್ಥವಾಗುತ್ತದೆ. ಆದರೆ ಆರ್‍ಬಿಐ, ಆರ್‍ಬಿಐ ಗವರ್ನರ್‍ರನ್ನು ವಿವಾದದಲ್ಲಿ ತರಬೇಡಿ. ಅವರಿಗೆ ಅವರದೇ ಆದ ಗೌರವವಿದೆ. ಅದನ್ನು ಹಾಳು ಮಾಡುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದರು.
Advertisement
ದೇಶದಲ್ಲಿ ಒಂದೇ ಬಾರಿ ಬದಲಾವಣೆ ಅಸಾಧ್ಯ. ಬದಲಾವಣೆಗೆ ನಾವೆಲ್ಲರೂ ತಯಾರಾಗಬೇಕು. ನಾವೇನಾದರೂ ಬದಲಾವಣೆ ತರಲು ಯತ್ನಿಸಿದರೆ ಟೀಕೆಗಳೇ ಬರುತ್ತವೆ. ದೊಡ್ಡ ನಿರ್ಧಾರಗಳನ್ನು ಜಾರುಗೆ ತರುವಾಗ ತೊಂದರೆ ಸಹಜ. ಯಾವ ಸರ್ಕಾರವೂ ಮಲಗಬೇಕೆಂದು ಬರುವುದಿಲ್ಲ. ಕೆಂಪುಕೋಟೆಯ ಭಾಷಣದಲ್ಲಿ ನಾನು ಇದೇ ಮಾತನ್ನು ನಾನು ಹೇಳಿದ್ದೆ. ನಾನು ಸ್ವಚ್ಛ ಭಾರತದ ಬಗ್ಗೆ ಮಾತನಾಡಿದೆ. ಆದರೆ ಅದರ ಬಗ್ಗೆ ಲೇವಡಿ ಮಾಡುತ್ತಾರೆ. ಸ್ವಚ್ಛತಾ ಆಂದೋಲನದಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಎಂದರು.
ಮಹಿಳೆಯರ ಸುರಕ್ಷತೆಗಾಗಿ 24 ಗಂಟೆಗಳ ಹೆಲ್ಪ್‍ಲೈನ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ಪಾವತಿಗೆ ನಾವೆಲ್ಲರೂ ಒತ್ತು ನೀಡಬೇಕಿದೆ. ನೋಟ್ ಬ್ಯಾನ್ ಮಾಡಿದ 40 ದಿನಗಳಲ್ಲಿ 700 ಮಾವೋವಾದಿಗಳು ಶರಣಾದರು. ಇದು ಮೊದಲ ಬಾರಿಗೆ ಆಯಿತು. ಅಪ್ರಮಾಣಿಕರಿಗೆ ಶಿಕ್ಷೆಯಾಗುವವರೆಗೆ ಪ್ರಾಮಾಣಿಕರಿಗೆ ಬಲ ಬರಲ್ಲ. ಬ್ಯಾಂಕ್‍ಗಳಿಗೆ ನಗದು ಹರಿದು ಬಂದಿದೆ. ಇದರಿಂದಾಗಿ ಬ್ಯಾಂಕ್‍ಗಳ ಬಡ್ಡಿ ದರದಲ್ಲಿ ಕಡಿತವಾಗಿವೆ. ಜನರ ಮೂಡ್ ರಾಜಕಾರಣಿಗಳ ಮೂಡ್‍ಗಿಂತ ತುಂಬಾ ಭಿನ್ನವಾಗಿದೆ ಎಂದು ಮೋದಿ ಹೇಳಿದರು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಬ್ಯಾಲಟ್ ಪೇಪರ್ ಬದಲು ಬಟನ್ ಒತ್ತಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಿಶ್ವವೇ ಕಾಗದರಹಿತವಾಗಿ ಸಾಗುತ್ತದೆ ಎಂದಾದರೆ ಇದು ನಮಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.