ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಜ.11ರಂದು ಗುಜರಾತ್‌ನ ಪ್ರಸಿದ್ಧ ಸೋಮನಾಥ ದೇವಾಲಯಕ್ಕೆ (Somnath Temple) ಭೇಟಿ ನೀಡಲಿದ್ದಾರೆ. ಈ ವೇಳೆ `ಸೋಮನಾಥ ಸ್ವಾಭಿಮಾನ ಪರ್ವ’ದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಜನವರಿ 8ರಿಂದ 11ರ ತನಕ ನಡೆಯಲಿರುವ ಸ್ವಾಭಿಮಾನ ಪರ್ವವು ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಒಳಗೊಂಡಿದೆ. ಭಾರತದ ಪ್ರಾಚೀನ ಸಾಂಸ್ಕೃತಿಕ ಪರಂಪರೆ ಮತ್ತು ಸ್ವಾಭಿಮಾನವನ್ನು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ವೇಳೆ ಧಾರ್ಮಿಕ ಅನುಷ್ಠಾನಗಳು, ಆಧ್ಯಾತ್ಮಿಕ ಪ್ರವಚನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.ಇದನ್ನೂ ಓದಿ: `ಗಿಲ್ಲಿನೇ ಗೆಲ್ಬೇಕು, ಗಿಲ್ಲಿನೇ ಗೆಲ್ಲೋದು’ ಎಂದ ಸ್ಪಂದನ
ಈ ಕಾರ್ಯಕ್ರಮ ಮೊಹಮ್ಮದ್ ಘಜನಿ ಸೋಮನಾಥ ದೇವಾಲಯವನ್ನು ಧ್ವಂಸಗೊಳಿಸಿದ 1000 ವರ್ಷಗಳನ್ನು ಗುರುತಿಸುತ್ತದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವೆಂದು ಪರಿಗಣಿಸಲಾಗಿರುವ ಸೋಮನಾಥ ದೇವಾಲಯವು ಭಾರತೀಯ ಸನಾತನ ಪರಂಪರೆ ಮತ್ತು ಆಸ್ತಿಕತೆಯ ಸಂಕೇತವಾಗಿದೆ. ಆಕ್ರಮಣಕಾರರಿಂದ ಹಲವು ಬಾರಿ ಧ್ವಂಸಗೊಂಡರೂ ಪುನಃನಿರ್ಮಾಣಗೊಂಡು ನಿಂತಿದೆ.
ಪ್ರಧಾನಿ ಮೋದಿ ಅವರು ಈ ಸಂದರ್ಭದಲ್ಲಿ ಒಂದು ಲೇಖನ ಬರೆದಿದ್ದು, ಘಜನಿ ಮೊಹಮ್ಮದ್‌ನ ಹಿಂಸಾತ್ಮಕ ಮತ್ತು ಬರ್ಬರ ಆಕ್ರಮಣದ ಪ್ರಯತ್ನದ 1000 ವರ್ಷಗಳನ್ನು ಇದು ಎತ್ತಿಹಿಡಿಯುತ್ತದೆ. ಹೀಗಾಗಿ 2026 ಸೋಮನಾಥ ದೇವಾಲಯಕ್ಕೆ ವಿಶೇಷ ಮಹತ್ವದ ವರ್ಷ ಎಂದು ಉಲ್ಲೇಖಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ಟ್ರಸ್ಟ್ನಿಂದ ಪ್ರಧಾನಿಯವರ ಭೇಟಿಗೆ ಸಿದ್ಧತೆಗಳು ನಡೆಯುತ್ತಿವೆ. ಭದ್ರತಾ ವ್ಯವಸ್ಥೆ ಮತ್ತು ಭಕ್ತಾದಿಗಳ ಸೌಲಭ್ಯಕ್ಕೆ ವಿಶೇಷ ಗಮನ ಹರಿಸಲಾಗುತ್ತಿದೆ. ಬಿಜೆಪಿ ವಕ್ತಾರ ಡಾ.ಸುಧಾಂಶು ತ್ರಿವೇದಿ ಅವರು ಈ ಕಾರ್ಯಕ್ರಮ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದು, ಭಾರತದ ಗುರುತು, ಅಸ್ತಿತ್ವ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿದ್ದಾರೆ. ಈ ಸ್ವಾಭಿಮಾನ ಪರ್ವವು ವರ್ಷಪೂರ್ತಿ ಚಟುವಟಿಕೆಗಳನ್ನು ಒಳಗೊಂಡಿದ್ದು, ಭಾರತೀಯ ಸಂಸ್ಕೃತಿಯ ಅಜೇಯತೆಯನ್ನು ಜಗತ್ತಿಗೆ ತೋರಿಸುವ ಪ್ರಯತ್ನವಾಗಿದೆ.ಇದನ್ನೂ ಓದಿ: US ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮನೆ ಮೇಲೆ ಗುಂಡಿನ ದಾಳಿ – ಶಂಕಿತ ಅರೆಸ್ಟ್

