ಉಡುಪಿ: ಇದೇ 28ರಂದು ಉಡುಪಿಯ (Udupi) ಕೃಷ್ಣ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಶ್ರೀಕೃಷ್ಣನ ಸನ್ನಿಧಾನದಲ್ಲಿ ಭಗವದ್ಗೀತೆಯ ಶ್ಲೋಕ ಪಠಿಸಲಿದ್ದಾರೆ.
ಉಡುಪಿಯಲ್ಲಿ ಪ್ರಧಾನಿ ಮೋದಿಯವರ (PM Modi) ಕಾರ್ಯಕ್ರಮ ನಿಗದಿಯಾಗಿದ್ದು, ನ.28ರಂದು ಶ್ರೀ ಪುತ್ತಿಗೆ ಮಠದವರು ಹಮ್ಮಿಕೊಂಡಿರುವ ವಿಶ್ವ ಗೀತಾ ಪರ್ಯಾಯದ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ.ಇದನ್ನೂ ಓದಿ: ಅರ್ಜುನ್ ಸರ್ಜಾ ನಟನೆಯ ಮಫ್ತಿ ಪೊಲೀಸ್ ರಿಲೀಸ್ ಡೇಟ್ ಫಿಕ್ಸ್
ಪ್ರಧಾನಿ ನರೇಂದ್ರ ಮೋದಿಯವರಿಗೆ ಭಗವದ್ಗೀತೆ ಅಚ್ಚುಮೆಚ್ಚು. ವಿಶ್ವ ಪರ್ಯಟಣೆಯ ವೇಳೆ ಅಂತಾರಾಷ್ಟ್ರೀಯ ಮುಖಂಡರಿಗೆ ಮೋದಿ ಭಗವದ್ಗೀತೆ ನೀಡಿ, ಅದರ ಸಂದೇಶವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದವರು. ಸುಮಾರು 1.1 ಲಕ್ಷ ಮಂದಿ ಆ ದಿನ ಭಗವದ್ಗೀತೆ ಪಠಣ ಮಾಡಲಿದ್ದು, ಕೊನೆಯ 10 ನಿಮಿಷಗಳ ಕಾಲ ಪ್ರಧಾನಿಯವರು ಕೂಡ ಭಗವದ್ಗೀತೆಯ ಹತ್ತು ಶ್ಲೋಕಗಳನ್ನು ಪಠಿಸಲಿದ್ದಾರೆ.
ವಿಶ್ವಗೀತಾ ಪರ್ಯಾಯ ಹಮ್ಮಿಕೊಂಡಿರುವ ಪುತ್ತಿಗೆ ಶ್ರೀಗಳು, ಈ ವರ್ಷದ ಅಂತ್ಯಕ್ಕೆ ತಮ್ಮ ಪೂಜಾ ಅವಧಿಯನ್ನು ಪೂರೈಸಲಿದ್ದಾರೆ. 11 ಗಂಟೆಗೆ ಕೃಷ್ಣಮಠಕ್ಕೆ ಆಗಮಿಸಲಿರುವ ಪ್ರಧಾನಿ ಅವರು ಕೃಷ್ಣನ ದರ್ಶನ ಪಡೆದು, ಸುವರ್ಣ ತೀರ್ಥ ಮಂಟಪವನ್ನು ಉದ್ಘಾಟಿಸಲಿದ್ದಾರೆ. ಕನಕನ ಕಿಂಡಿಗೆ ಹೊಸತಾಗಿ ಅರ್ಪಿಸುವ ಸುವರ್ಣ ಕವಚವನ್ನು ಉದ್ಘಾಟಿಸಲಿದ್ದಾರೆ.
ಗೀತಾ ಮಂದಿರದಲ್ಲಿ ಸ್ವಾಮೀಜಿಗಳೊಂದಿಗೆ ಸಮಾಲೋಚನೆ ನಡೆಸಿ, ಅಲ್ಲಿಯೇ ಭೋಜನ ಪ್ರಸಾದ ಸ್ವೀಕರಿಸಲಿದ್ದಾರೆ. ಪಕ್ಕದ ವಿಶಾಲ ಗದ್ದೆಯಲ್ಲಿ ಲಕ್ಷಕಂಠ ಗೀತಾ ಪಠಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಭದ್ರತಾ ಮೀಟಿಂಗ್‌ಗಳನ್ನು ಜಿಲ್ಲಾ ಪೊಲೀಸರು ಮತ್ತು ಜಿಲ್ಲಾಡಳಿತ ನಡೆಸುತ್ತಿದೆ. ಪ್ರಧಾನಿ ಮೋದಿ ಕಚೇರಿಯಿಂದ ಪ್ರವಾಸದ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬರಬೇಕಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ, 16 ವರ್ಷದ ಹಿಂದೆ ನಮ್ಮ ಪರ್ಯಾಯದ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆ ಸಮಯದಲ್ಲಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದರು. ಈಗ ಮತ್ತೆ ಪ್ರಧಾನಿಯಾಗಿ ಮೊದಲ ಬಾರಿಗೆ ಕೃಷ್ಣಮಠಕ್ಕೆ ಭೇಟಿ ಕೊಡುತ್ತಿರುವುದು ಸಂತಸ ತಂದಿದೆ. ಭಗವದ್ಗೀತೆಯನ್ನು ಅವರು ಭೇಟಿ ಕೊಡುವ ವಿಶ್ವದ ಎಲ್ಲಾ ದೇಶಗಳಿಗೆ ಕೊಂಡೊಯ್ಯುತ್ತಿದ್ದಾರೆ. ಅದರ ಸಾರವನ್ನು ಪ್ರಚಾರಪಡಿಸಿದ್ದಾರೆ. ಗಣ್ಯಮಾನ್ಯರಿಗೆ ಭಗವದ್ಗೀತೆ ಗ್ರಂಥವನ್ನು ಉಡುಗೊರೆಯಾಗಿ ಕೊಡುತ್ತಾರೆ. ಉಡುಪಿಯ ಕಾರ್ಯಕ್ರಮದಲ್ಲಿ ಅವರು ಕೆಲ ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಸುಮಾರು ಎರಡುವರೆ ಗಂಟೆಗಳ ಕಾಲ ಅವರು ಉಡುಪಿಯಲ್ಲಿ ಇರಲಿದ್ದಾರೆ ಎಂದರು.ಇದನ್ನೂ ಓದಿ: ಧರ್ಮಸ್ಥಳ ನಾಪತ್ತೆ ಕೇಸ್ | 74 FIR ದಾಖಲಿಸಿ ತನಿಖೆಗೆ ಆದೇಶಿಸಿ – ಸೌಜನ್ಯ ತಾಯಿಯಿಂದ PIL

