ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ಞಾವಂತಿಕೆ ನೆಲದಲ್ಲಿ ಜನರನ್ನು ತಪ್ಪುದಾರಿಗೆ ಎಳೆದಿದ್ದಾರೆ. ಅವರ ಹೇಳಿಕೆ ವಾಸ್ತವಾಂಶಕ್ಕೆ ಸಂಬಂಧವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‍ಕೆ ಪಾಟೀಲ್ ಹೇಳಿದ್ದಾರೆ.
ಸಣ್ಣಮಟ್ಟದ ರಾಜಕೀಯ ಭಾಷಣದ ಮೂಲಕ ಸುಳ್ಳುಗಳ ಸರಮಾಲೆ ಮಾಡಿ ಪ್ರಜ್ಞಾವಂತ ಜನರಿಗೆ ಅವಮಾನಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Advertisement
ಪ್ರಧಾನಿ ಘನತೆ ಕಡಿಮೆ ಮಾಡಬೇಕೆನ್ನುವ ದುರುದ್ದೇಶ ಅಥವಾ ಅಜ್ಞಾನದಿಂದಲೋ ಮೋದಿ ಅವರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ 2005-06ರಲ್ಲೆ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಎಲ್ಲರಿಗೂ ಗೊತ್ತಿದೆ. 2007ರಲ್ಲಿ ಗೋವಾದಲ್ಲಿ ಮಹದಾಯಿ ವಿಚಾರದಲ್ಲಿ ಸೋನಿಯಾಗಾಂಧಿ ಹೇಳಿಕೆ ನೀಡಿದಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲೆ ಇದ್ದರು. ಕರ್ನಾಟಕದ ರಾಜಕೀಯ ಘಟನೆ ಬಗ್ಗೆ ಮಾತನಾಡುವಾಗ ಇಲ್ಲಿನ ರಾಜಕೀಯದ ಬಗ್ಗೆ ಅರಿವು ಹೊಂದಿರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement
ಸುದೈವವೋ, ದುರ್ದೈವವೋ ಪ್ರಧಾನಿ ಪಟ್ಟದಲ್ಲಿದ್ದೀರಿ. ನಿಮಗಿರೋ ಶಿಷ್ಠಾಚಾರದ ಹಿನ್ನೆಲೆಯಲ್ಲಿ ಸುಳ್ಳನ್ನು ಜನರಿಗೆ ಬಿತ್ತರಿಸಬೇಡಿ. 2007ರಲ್ಲಿ ಸೋನಿಯಾಗಾಂಧಿ ಹೇಳಿಕೆಯನ್ನು ವಿವಾದಾತ್ಮಕವಾಗಿ ಪ್ರಕಟಿಸಿದ್ದು ಮಾಧ್ಯಮಗಳು. ಹೇಳಿಕೆ ಬಂದ ತಕ್ಷಣವೇ ಸೋನಿಯಾಗಾಂಧಿ ಪ್ರತಿಕ್ರಿಯಿಸಿದ್ದಾರೆ. ವಿವಾದಾತ್ಮ ಹೇಳಿಕೆ ಪ್ರಧಾನಿ ಗಮನಕ್ಕೆ ಬಂದಿದೆ. ಆದರೆ ಅದಕ್ಕೆ ಪ್ರತಿಕ್ರಿಯಿಸಿದ ಹೇಳಿಕೆ ಪ್ರಧಾನಿ ಗಮನಕ್ಕೆ ಬರಲಿಲ್ಲವೇ ಎಂದು ಅವರು ಪ್ರಶ್ನೆ ಮಾಡಿದರು.
Advertisement
ಮಹದಾಯಿ ವಿಚಾರದಲ್ಲಿ ನ್ಯಾಯಾಧೀಕರಣದ ಮೊರೆ ಹೋದವರು ಬಿಎಸ್ ಯಡಿಯೂರಪ್ಪ. ಈ ಬಗ್ಗೆ ವಾಸ್ತವಿಕ ಸತ್ಯ ಕೂಡ ಪ್ರಧಾನಿಗೆ ಗೊತ್ತಿರಲಿಲ್ವಾ?. ಬಿಜೆಪಿಯವರು ಮಾಡಿದ ತಪ್ಪಿಗೆ ನಮ್ಮನ್ನು ಹೊಣೆಗಾರರನ್ನಾಗಿಸುತ್ತಿದ್ದಾರೆ. ಬಿಎಸ್ ಯಡಿಯೂರಪ್ಪ ಕೂಡ ಹುಬ್ಬಳ್ಳಿಯಲ್ಲಿ ಪರಿಕ್ಕರ್ ಪತ್ರ ಓದಿ ಜನರ ಆಕ್ರೋಶಕ್ಕೆ ಕಾರಣರಾಗಿದ್ದರು. ಅದೇ ಮಾದರಿಯಲ್ಲಿ ಪ್ರಧಾನಿ ಕೂಡ ಮತ್ತೊಂದು ತಪ್ಪು ಮಾಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಕಳಸಾ ಬಂಡೂರಿ ಯೋಜನೆ ಹುಟ್ಟು ಹಾಕಿದೆ. ನೀವು ಹೇಳಿದ್ದು ಕೇಳಿಕೊಂಡು ಸುಮ್ಮನಿರಲು ರಾಜ್ಯದ ಜನತೆ ಮೂರ್ಖರಲ್ಲ. ಈ ಪವಿತ್ರ ಭೂಮಿಯ ಮೇಲೆ ನೀವು ಕನ್ನಡಿಗರ ಕ್ಷಮೆ ಕೋರಬೇಕು. ಕ್ಷಮೆ ಕೋರದಿದ್ದರೆ ಕನ್ನಡಿಗರ ಶಾಪ ನಿಮಗೆ ತಟ್ಟುತ್ತೆ ಎಂದು ಕಿಡಿಕಾರಿದರು.